ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದ ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತರಗತಿಗಳನ್ನು ಬಂದ್ ಮಾಡಿಸಿದ್ದಾರೆ.
ಎರಡು ಶಾಲೆಗಳಲ್ಲಿ ಕೋವಿಡ್ ಲಸಿಕೆ ಹಾಕುವಾಗ ರೋಗ ಲಕ್ಷಣ ಕಂಡು ಬಂದ ವಿದ್ಯಾರ್ಥಿಗಳಿಗೆ ರ್‍ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ. ಆಗ ಒಂದು ಶಾಲೆಯ 6ನೇ ತರಗತಿಯ 21 ವಿದ್ಯಾರ್ಥಿಗಳು ಹಾಗೂ ಇನ್ನೊಂದು ಶಾಲೆಯ 5ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಕೋವಿಡ್ ಸೋಂಕು ತಗುಲಿರುವ ಶಾಲೆಗಳ ಬಗ್ಗೆ ಮಾಹಿತಿ ತರಿಸಿಕೊಂಡಿರುವ ಬಿಬಿಎಂಪಿಯ ವಿಶೇಷ ಆಯುಕ್ತ ಎನ್.ಬಿ.ರವೀಂದ್ರ ಕೊರೊನಾ ಶಂಕಿತ ಎರಡು ಶಾಲೆಗಳ ಎಲ್ಲ ವಿದ್ಯಾರ್ಥಿಗಳನ್ನು ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಿಲು ಸೂಚಿಸಿದ್ದಾರೆ.
ಅಂತೆಯೇ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿದಾಗ 21 ವಿದ್ಯಾರ್ಥಿಗಳ ವರದಿ ನೆಗೆಟಿವ್ ಆಗಿದೆ. ಇನ್ನೂ 10 ವಿದ್ಯಾರ್ಥಿಗಳ ರಿಪೋರ್ಟ್ ಬರಬೇಕಾಗಿದೆ. ಮುಂಜಾಗ್ರತೆಯಾಗಿ ಎರಡೂ ಶಾಲೆಗಳಿಗೆ ರಜೆ ನೀಡಿ, ಸ್ಯಾನಿಟೈಸ್ ಮಾಡಲಾಗಿದೆ. ಜೊತೆಗೆ ಮಾಸ್ಕ್ ಧರಿಸುವುದೂ ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಿಬಿಎಂಪಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: 'ನೀನಿವತ್ತು ಪೋಷಕರಿಗೆ ಮಾಡಿದ್ದನ್ನು ಮುಂದೊಂದು ದಿನ ನಿನ್ನ ಮಕ್ಕಳೇ ನಿನಗೆ ಮಾಡಬಹುದು':ಹೈಕೋರ್ಟ್ ಹೀಗೆ ಹೇಳಿದ್ದೇಕೆ?