ಬೆಂಗಳೂರು: ಆಗ್ನೇಯ ವಿಭಾಗದ ಪೊಲೀಸರಿಗಾಗಿ ಕೋವಿಡ್ ಕೇರ್ ಸೆಂಟರ್ ಅನ್ನು ಬೆಂಗಳೂರು ಸಿಟಿ ಕಮೀಷನರ್ ಕಮಲ್ ಪಂತ್ ಲೋಕಾರ್ಪಣೆಗೊಳಿಸಿದರು. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು, ಕಾವೇರಿ ಆಸ್ಪತ್ರೆ ಮತ್ತು ಐಐಟಿ-ಬಿ ಕ್ಯಾಂಪಸ್ ಸಂಯುಕ್ತಾಶ್ರಯದಲ್ಲಿ ಕೇಂದ್ರವನ್ನು ತೆರೆಯಲಾಗಿದೆ.
ಕ್ಯಾಂಪಸ್ನ ಮೂರು ಮಹಡಿಗಳಲ್ಲಿ 48 ಹಾಸಿಗೆಗಳ 24 ಕೊಠಡಿಗಳನ್ನು ಚಿಕಿತ್ಸೆಗಾಗಿ ಸಜ್ಜುಗೊಳಿಸಲಾಗಿದೆ. ಪ್ರತಿ ಕೊಠಡಿಗೂ ಎರಡು ಹಾಸಿಗೆಯಂತೆ ತಪಾಸಣೆಗೆ ಓರ್ವ ವೈದ್ಯ, ಇಬ್ಬರು ಹೌಸ್ ಕೀಪಿಂಗ್, ಇಬ್ಬರು ನರ್ಸ್ಗಳನ್ನು ನಿಯೋಜಿಸಿದ್ದು, ಎರಡು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಮೊದಲ ಹಂತವಾಗಿ ತಪಾಸಣೆಗೆ ಬಂದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟರೆ ಇಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ಕಂಡುಬಂದಾಗ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗುವುದು.