ಬೆಂಗಳೂರು : ದೇಶಾದ್ಯಂತ ಮೊದಲ ಹಾಗೂ ಎರಡನೇ ಕೋವಿಡ್ ಅಲೆ ಮುಗಿಯಿತು ಎನ್ನುವಾಗಲೇ ಮೂರನೇ ಅಲೆ ಭೀತಿ ಶುರುವಾಗಿದೆ. ಮೂರನೇ ಅಲೆಯ ತಡೆಗೆ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದೆ. ಅಂತಿಮ ವರದಿ ತಯಾರಿಯಲ್ಲಿ ತಜ್ಞರು ಇದ್ದಾರೆ. ಎರಡನೇ ಅಲೆ ಮುಗಿಯುವ ಮುನ್ನವೇ ಈಗಾಗಲೇ ಡೆಲ್ಟಾ ಪ್ಲಸ್ ರೂಪಾಂತರಿ ರಾಜ್ಯದಲ್ಲೂ ಪತ್ತೆಯಾಗಿದೆ. ಇದುವೇ ಮೂರನೇ ಅಲೆಯ ಭೀಕರತೆಗೆ ಸಾಕ್ಷಿಯಾಗಲಿದೆಯಾ ಎಂಬ ಆತಂಕ ಶುರುವಾಗಿದೆ.
ಮೂಲ ಕೊರೊನಾ ಸೋಂಕು ಎಲ್ಲಾ ದೇಶಗಳಿಗೆ ಹರಡಿ, ಅಲ್ಲಿ ಜನರ ದೇಹ ಸೇರಿರುವ ವೈರಾಣು ಅಲ್ಲಿನ ಪ್ರಾದೇಶಿಕವಾರು ವಾತಾವರಣಕ್ಕನುಗುಣವಾಗಿ ಹೊಸ ತಳಿಯಾಗಿ ಬದಲಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಯುಕೆ ರೂಪಾಂತರಿ, ಆಫ್ರಿಕಾ ರೂಪಾಂತರಿಯನ್ನು ಕಾಣಬಹುದು. ಮೂರನೇ ಅಲೆಯಲ್ಲಿ ಜಿಲ್ಲಾವಾರು ಸಂಪೂರ್ಣ ಮಾಹಿತಿಕ್ಕನುಗುಣವಾಗಿ ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳಿಗೆ ಸೋಂಕು ತಗುಲಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಇದಕ್ಕೆ ತಕ್ಕಂತೆ ಜಿಲ್ಲಾ ಮಟ್ಟದಲ್ಲಿ ಮೂರನೇ ಅಲೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ಮೂರನೇ ಅಲೆಯಲ್ಲಿ ಟಾರ್ಗೆಟ್ ಆಗುವ ಜಿಲ್ಲೆಗಳು ಯಾವುವು? ಮುನ್ನೆಚ್ಚರಿಕೆಯನ್ನು ಯಾವ ಜಿಲ್ಲೆ ಹೆಚ್ಚು ವಹಿಸಬೇಕು? ಎಚ್ಚರ ತಪ್ಪಿದ್ರೆ ಎಷ್ಟರ ಮಟ್ಟಿಗೆ ಅಪಾಯ ಆಗಲಿದೆ ಎಂಬುದನ್ನು ತಜ್ಞರು ಅಂದಾಜಿಸಿದ್ದಾರೆ.
ಮಹಾರಾಷ್ಟ್ರ- ಕೇರಳ ಗಡಿಭಾಗದಲ್ಲಿ ಎಚ್ಚರಿಕೆ ಅಗತ್ಯ : ಮಹಾರಾಷ್ಟ್ರ- ಕೇರಳ ರಾಜ್ಯದಲ್ಲಿ ಹೆಚ್ಚು ಕೊರೊನಾ ಸೋಂಕು ಹಾಗೂ ರೂಪಾಂತರಿ ಸೋಂಕು ಮೊದಲು ಪತ್ತೆಯಾಗುತ್ತಿದೆ. ಹೀಗಾಗಿ, ಕರ್ನಾಟಕಕ್ಕೆ ಹೊಂದಿಕೊಂಡಿರುವ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗದಲ್ಲಿ ಜನರ ಓಡಾಟದ ಕುರಿತು ಎಚ್ಚರಿಕೆ ವಹಿಸುವ ಅಗತ್ಯ ಇದೆ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ, ಉತ್ತರಕನ್ನಡ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ನಿರ್ಬಂಧ ವಹಿಸುವ ಅಗತ್ಯವಿದೆ. ಕೇರಳ ಗಡಿ ಭಾಗಗಳಾದ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಎಚ್ಚರಿಕೆ ಅಗತ್ಯ ಇದೆ. ಗಡಿ ಭಾಗದಿಂದ ಆಗಮಿಸುವ ಜನರಿಗೆ ರ್ಯಾಂಡಮ್ ಟೆಸ್ಟ್ ಮಾಡುವುದು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರ ಕುರಿತು ಮಾಹಿತಿ ಪಡೆದು, ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ಪ್ರವೇಶಿಸಲು ಅನುಮತಿ ನೀಡಬೇಕು.
ಮೂರನೇ ಅಲೆಯಲ್ಲಿ ಯಾವ ಜಿಲ್ಲೆಗೆ ಆಪತ್ತು : ಕೋವಿಡ್ ಮೂರನೇ ಅಲೆಯ ಕುರಿತು ವರದಿ ನೀಡಿರುವ ತಜ್ಞರು, ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.2.2 ಮಂದಿ ಸೋಂಕಿಗೀಡಾಗಬಹುದು ಎಂದಿದ್ದಾರೆ. ಅಂದರೆ 15.4ಲಕ್ಷ ಮಂದಿಗೆ ಸೋಂಕು ತಗುಲಬಹುದು. 18 ವರ್ಷದೊಳಗಿನ 2.38 ಕೋಟಿ ಮಕ್ಕಳು ಇದ್ದು, ಸುಮಾರು 3.40 ಲಕ್ಷ ಮಕ್ಕಳಲ್ಲಿ ಸೋಂಕು ಪತ್ತೆಯಾಗುವ ಸಾಧ್ಯತೆಯಿದೆ.
8 ವಾರಗಳ ಕಾಲ ಮೂರನೇ ಅಲೆ ಬಾಧಿಸಬಹುದೆಂದು ಅಂದಾಜು ಮಾಡಲಾಗಿದೆ. ಮೂರನೇ ಅಲೆಯ ಸಂದರ್ಭದಲ್ಲಿ ರಾಜ್ಯಾದ್ಯಂತ 23,804 ಸಾಮಾನ್ಯ ಹಾಸಿಗೆಗಳ ಅಗತ್ಯವಿದೆ. ಐಸಿಯು ಹಾಗೂ ಹೆಚ್ಡಿಯು 6,802 ಹಾಸಿಗೆ, ಕೋವಿಡ್ ಕೇರ್ ಸೆಂಟರ್ನಲ್ಲಿ 43,358 ಹಾಸಿಗೆಗಳ ಅಗತ್ಯವಿದೆ.
ಹೆಚ್ಚು ಪ್ರಕರಣ ಸಂಭವಿಸಬಹುದಾದ ಟಾಪ್ 10 ಜಿಲ್ಲೆಗಳು :
ಮೊದಲ ಹಾಗೂ ಎರಡನೇ ಅಲೆ ಆಧರಿಸಿ ಕೊರೊನಾ ಮೂರನೇ ಅಲೆಯ ತೀವ್ರತೆಯನ್ನು ಜಿಲ್ಲಾವಾರು ಅಂದಾಜಿಸಲಾಗಿದೆ.
ಜಿಲ್ಲೆ-ಜನಸಂಖ್ಯೆ- 3ನೇ ಅಲೆ ಸೋಂಕಿತರ ಸಂಖ್ಯೆ (0-18 ವರ್ಷ ವಯೋಮಾನ)
- ಬೆಂಗಳೂರು ನಗರ- 32,21,795 ಜನಸಂಖ್ಯೆ- 45,958 ಮಕ್ಕಳಿಗೆ ಸೋಂಕು ತಗುಲಬಹುದು.
- ಬೆಳಗಾವಿ- 20,01,176 ಜನಸಂಖ್ಯೆ- 28,546 ಮಕ್ಕಳಿಗೆ ಸೋಂಕು ತಗುಲಬಹುದು.
- ಕಲಬುರಗಿ- 12,15,432 ಜನಸಂಖ್ಯೆ- 17,338 ಮಕ್ಕಳಿಗೆ ಸೋಂಕು ತಗುಲಬಹುದು.
- ಬಳ್ಳಾರಿ- 11,04,071 ಜನಸಂಖ್ಯೆ- 15,749 ಮಕ್ಕಳಿಗೆ ಸೋಂಕು ತಗುಲಬಹುದು.
- ವಿಜಯಪುರ- 10,02,391 ಜನಸಂಖ್ಯೆ- 14,299 ಮಕ್ಕಳಿಗೆ ಸೋಂಕು ತಗುಲಬಹುದು.
- ತುಮಕೂರು- 9,48,423 ಜನಸಂಖ್ಯೆ- 13,529 ಮಕ್ಕಳಿಗೆ ಸೋಂಕು ತಗುಲಬಹುದು.
- ರಾಯಚೂರು- 13,118 ಮಕ್ಕಳಿಗೆ ಸೋಂಕು ತಗುಲಬಹುದು.
- ಬಾಗಲಕೋಟೆ- 8,52,900ಜನಸಂಖ್ಯೆ- 12,166 ಮಕ್ಕಳಿಗೆ ಸೋಂಕು ತಗುಲಬಹುದು.
- ಬೀದರ್- 7,86,476 ಜನಸಂಖ್ಯೆ- 11,219 ಮಕ್ಕಳಿಗೆ ಸೋಂಕು ತಗುಲಬಹುದು.
- ದಾವಣಗೆರೆ- 7,57,255 ಜನಸಂಖ್ಯೆ- 10,802 ಮಕ್ಕಳಿಗೆ ಸೋಂಕು ತಗುಲಬಹುದು.
ಇದನ್ನೂ ಓದಿ: ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
ಸದ್ಯ ಮಧ್ಯಂತರ ವರದಿ ಆಧಾರದ ಮೇಲೆ ಸರ್ಕಾರ ಹಾಗೂ ಆಯಾ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೋಂಕು ತಡೆಗೆ ಕೆಲ ನಿರ್ಬಂಧ ಹೇರಬೇಕಿದೆ. ಸೋಂಕು ತಡೆಗೆ ರೂಪುರೇಷೆ ಸಿದ್ಧತೆ ಮಾಡಿಕೊಳ್ಳದೇ ಇದ್ದರೆ, ಮೂರನೇ ಅಲೆಯ ಭೀಕರತೆಗೆ ಸಾಕ್ಷಿಯಾಗಬೇಕಿದೆ.