ಬೆಂಗಳೂರು: ಮಹಾಮಾರಿ ಕೊರೊನಾ ಭೀತಿಯಿಂದಾಗಿ ಜನರು ಮನೆಯಿಂದ ಹೊರಬರಲು ಚಿಂತಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆ ಮಾತಿದ್ದು, ದೇವಸ್ಥಾನದ ಮೊರೆ ಹೋಗಿ ತಮಗೆ ಬಂದಿರುವ ಕಷ್ಟ ದೂರ ಮಾಡು ಎಂದು ಕೇಳಿಕೊಳ್ಳಲು ಇದೀಗ ಅವಕಾಶವಿಲ್ಲದಂತಾಗಿದೆ.
ಕೊರೊನಾ ಸೋಂಕು ಎಲ್ಲೆಡೆ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದೆ. ರಾಜ್ಯದ ಬಹುತೇಕ ದೇವಾಲಯಗಳಿಗೆ ಕೊರೊನಾ ಸೋಂಕಿನ ಭೀತಿ ತಗುಲಿದೆ. ಸಾಕಷ್ಟು ದೇವಾಲಯಗಳಲ್ಲಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾಸನದಲ್ಲಿರುವ ವಿಶ್ವವಿಖ್ಯಾತ ಬೇಲೂರು, ಹಳೆಬೀಡು ಹಾಗೂ ಶ್ರವಣ ಬೆಳಗೊಳಕ್ಕೆ ಮಾರ್ಚ್ 31ರವರೆಗೆ ಪ್ರವೇಶ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಇದೇ ತಿಂಗಳ ಕೊನೆಯಲ್ಲಿ ನಡೆಯುವ ಚೆನ್ನಕೇಶವ ಜಾತ್ರೆ ಹಾಗೂ ರಥೋತ್ಸವಕ್ಕೂ ಬ್ರೇಕ್ ಬೀಳುವ ಸಾಧ್ಯತೆಗಳು ನಿಚ್ಚಳವಾಗಿದೆ. ಬೆಳಗಾವಿಯ ಸವದತ್ತಿ ಯಲ್ಲಮ್ಮ ಸನ್ನಿಧಾನಕ್ಕೆ ಬರುವ ಭಕ್ತರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇವಸ್ಥಾನ ಆಡಳಿತ ಮಂಡಳಿ ವಿಶೇಷ ವೈದ್ಯಕೀಯ ತಂಡವನ್ನು ರಚನೆ ಮಾಡಿದ್ದು ಭಕ್ತರ ಮೇಲೆ ತೀವ್ರ ನಿಗಾ ಇಡಲಾಗಿದೆ.
ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಾಲಯಕ್ಕೂ ಕೂಡಾ ಕೊರೊನಾ ಭೀತಿ ಆವರಿಸಿದೆ. ಇಂದಿನಿಂದ ದೇವಸ್ಥಾನದ ಬಾಗಿಲು ತೆರೆಯದೇ ಇರೋದಕ್ಕೆ ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ನಾಡದೇವಿ ಚಾಮುಂಡೇಶ್ವರಿಗೂ ಕೊರೊನಾ ಎಫೆಕ್ಟ್ನ ಬಿಸಿ ತಟ್ಟಿದೆ. ಮೈಸೂರಿನಲ್ಲಿ ತೀವ್ರ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಜನ ಗುಂಪು ಸೇರೋದನ್ನು ಕೂಡಾ ನಿಷೇಧ ಮಾಡಲಾಗಿದೆ. ಇದರಿಂದಾಗಿ ಚಾಮುಂಡೇಶ್ವರಿ ದೇವಾಲಯ ಭಕ್ತರಿಲ್ಲದೆ ಬಿಕೋ ಅಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಸೇವೆಗಳನ್ನು ಸ್ಥಗಿತಗೊಳಿಸೋದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೂ ಕೂಡಾ ಸೋಂಕಿನ ಭೀತಿ ಕಾಡಿದೆ. ನಿನ್ನೆ ನಡೆದ ರಥೋತ್ಸವವನ್ನು ತುಂಬಾ ಸರಳವಾಗಿ ಆಚರಣೆ ಮಾಡಲಾಗಿದ್ದು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಇದರ ಜತೆಗೆ ಬೆಂಗಳೂರಿನ ಗವಿಗಂಗಾಧೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಶಿರಸಿ ಮಾರಿಕಾಂಬೆ, ಧರ್ಮಸ್ಥಳ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿಯೂ ಕೊರೊನಾ ಭೀತಿ ಹೆಚ್ಚಾಗಿದ್ದು, ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಪ್ರವಾಸ ನಿಷೇಧ ಹೇರಲಾಗಿದೆ.