ಬೆಂಗಳೂರು: ದೇಶದ ವಿವಿಧ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಕೊರೊನಾ ವ್ಯಾಪಿಸುತ್ತಿಲ್ಲ. ಹೀಗಾಗಿ ತಮ್ಮ ವೃತ್ತಿಯನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಲು ಸಲೂನ್ಗಳು ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ.
ಬೆಂಗಳೂರಿನಲ್ಲಿ ಇರುವ 1.3 ಕೋಟಿ ಜನಸಂಖ್ಯೆಗೆ ಸೇವೆ ಸಲ್ಲಿಸುವ ದೃಷ್ಟಿಯಲ್ಲಿ ತಮ್ಮ ವೃತ್ತಿಯನ್ನು ಅಗತ್ಯ ಹಾಗೂ ಅನಿವಾರ್ಯ ಸೇವೆಗಳ ಪಟ್ಟಿಗೆ ಸೇರಿಸಬೇಕೆಂದು ಸವಿತಾ ಸಮಾಜದವರು ಮಾಡಿಕೊಂಡ ಮನವಿಗೆ ಪುರಸ್ಕಾರ ಸಿಕ್ಕಿಲ್ಲ. ಕಟಿಂಗ್ ಹಾಗೂ ಶೇವಿಂಗ್ಗಾಗಿ ಬೆಂಗಳೂರಿನ ಬಹುತೇಕ ನಾಗರಿಕರು ಸಲೂನ್ಗಳನ್ನು ಅವಲಂಬಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆ ಸಲೂನ್ಗಳು ಮುಚ್ಚಿದ್ದು, ಜನರಿಗೆ ಇದರಿಂದ ಸಾಕಷ್ಟು ಕಿರಿಕಿರಿ ಉಂಟಾಗಿದೆ. ಸರಿ ಸುಮಾರು 37 ಸಾವಿರದಷ್ಟಿರುವ ಕಟಿಂಗ್ ಶಾಪ್ಗಳನ್ನು ತೆರೆಯಲು ಹಂತ ಹಂತವಾಗಿ ಅವಕಾಶ ಮಾಡಿಕೊಡಬೇಕು ಎಂದು ಸವಿತಾ ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದರು. ಸರ್ಕಾರ ಜನರ ಸಮಸ್ಯೆ ಹಾಗೂ ಅಗತ್ಯವನ್ನು ಪರಿಗಣಿಸಿ ಪರವಾನಗಿ ನೀಡುವ ಯೋಚನೆ ಮಾಡಿತ್ತು. ಆದರೆ ಇದಕ್ಕೆ ಈಗ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದ ಕೆಲ ಪ್ರಕರಣಗಳು ತೊಡಕಾಗಿವೆ.
ರಾಜ್ಯದಲ್ಲಿ ಏ. 14ರ ನಂತರ ಮತ್ತೆ ಎರಡು ವಾರ ಲಾಕ್ಡೌನ್ ಮುಂದುವರಿಸಲು ಸರ್ಕಾರ ನಿರ್ಧರಿಸಿದ್ದು, ಈ ಸಂದರ್ಭ ಹಿಂದಿನ ಮಾದರಿಯ ಬದಲು ಕೆಲವು ಸೇವೆಗಳಿಗೆ ವಿನಾಯತಿ ನೀಡಲು ಕೂಡ ರೂಪುರೇಷೆ ಹೆಣೆಯಲಾಗುತ್ತಿದೆ. ಸರ್ಕಾರ ಸಿದ್ಧಪಡಿಸುತ್ತಿರುವ ಕಾರ್ಯಸೂಚಿಯಲ್ಲಿ ತಮ್ಮ ಸೇವೆ ಆರಂಭಿಸಲು ಅವಕಾಶ ಕೋರಿ ಸವಿತಾ ಸಮಾಜದ ಸಂಘಟನೆ ಪ್ರಯತ್ನ ನಡೆಸಿತ್ತು. ಆದರೆ ಇದೀಗ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದ ಕಾರಣ ನೀಡಿ ಇನ್ನೆರಡು ವಾರ ಸಲೂನ್ಗಳನ್ನು ತೆರೆಯದಂತೆ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಆಂಧ್ರ, ಮಹಾರಾಷ್ಟ್ರದಲ್ಲಿ ಏನಾಗಿದೆ..?: ಕೊರೋನಾ ಆತಂಕದ ನಡುವೆಯೂ ಸಲೂನ್ಗಳು ಕಾರ್ಯನಿರ್ವಹಿಸುತ್ತಿದ್ದವು. ಒಂದು ವಾರದಿಂದ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲಾ ಅರಸವರಲ್ಲಿ ಗ್ರಾಮದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಕ್ಷೌರ ಮಾಡಿದ್ದ ಸವಿತಾ ಸಮಾಜದ ವ್ಯಕ್ತಿಗೆ ಕೊರೊನಾ ಸೋಕು ತಗುಲಿತ್ತು. ಕ್ಷೌರಿಕಿನಿಂದ ಕಟಿಂಗ್ ಮಾಡಿಸಿಕೊಂಡ ನಾಲ್ವರು ಗ್ರಾಹಕರಿಗೂ ಸೋಂಕು ನಿನ್ನೆ ದೃಢಪಟ್ಟಿದ್ದು, ಭಾರೀ ಆತಂಕ ಮೂಡಿಸಿದೆ. ಹಾಗೆಯೇ ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ಮನೆಗೆ ತೆರಳಿ ಕೊರೊನಾ ಸೋಂಕಿತ ವೃದ್ಧರಿಗೆ ಕ್ಷೌರ ಸೇವೆ ಮಾಡಿದ ಇಬ್ಬರು ಯುವಕರಿಗೆ ಸೋಂಕು ತಗುಲಿದೆ. ಆ ಕ್ಷೌರಿಕರು ಇನ್ನೂ ಅದೆಷ್ಟು ಜನರಿಗೆ ಕಟಿಂಗ್ ಮಾಡಿದ್ದಾರೆಂದು ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾಗಿದೆ.