ಬೆಂಗಳೂರು: ಕೊರೊನಾ ತನ್ನ ಹರಡುವಿಕೆಯನ್ನ ಮುಂದುವರೆಸಿದ್ದು ಇದೀಗ ಇನ್ನಷ್ಟು ಆತಂಕ ಹೆಚ್ಚಿಸಿದೆ. ಸೆಪ್ಟೆಂಬರ್ ತಿಂಗಳು ಕೊರೊನಾ ತೀವ್ರತೆಗೆ ಸಾಕ್ಷಿಯಾಗಿದ್ದು ಇದೀಗ ಸಕ್ರಿಯ ಪ್ರಕರಣಗಳು ಒಂದು ಲಕ್ಷ ದಾಟಿದ್ದು ಭೀತಿಗೆ ಕಾರಣವಾಗಿದೆ. ಇಂದು ಒಂದೇ ದಿನ 8811 ಜನರಿಗೆ ಸೋಂಕು ದೃಢಪಟ್ಟಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 5,66,023ಕ್ಕೆ ಏರಿಕೆ ಆಗಿದೆ.
ಇನ್ನು 86 ಸೋಂಕಿತರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಸಾವಿನ ಸಂಖ್ಯೆ 8,503 ಕ್ಕೆ ಏರಿಕೆ ಆಗಿದೆ. ಇವತ್ತು 5,417 ಮಂದಿ ಗುಣಮುಖರಾಗಿದ್ದು 4,55,719 ಜನ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಇತ್ತ 1,01,782 ಸಕ್ರಿಯ ಪ್ರಕರಣಗಳು ಇದ್ದು 832 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಇಂದು 397 ಪ್ರಯಾಣಿಕರು ಆಗಮಿಸಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ. ಸೆಪ್ಟೆಂಬರ್ 25 ರಿಂದ ಸುಮಾರು 1,66,267 ಮಂದಿ ಹೋಂ ಕ್ವಾರೆಂಟೈನ್ನಲ್ಲಿ ಇದ್ದಾರೆ. ರಾಜ್ಯದಲ್ಲಿ ಈವರೆಗೆ 45,86,780 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.
ಆರ್.ಟಿ.ಪಿ.ಸಿ.ಆರ್ ಮತ್ತು ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಪರಿಷ್ಕೃತ ದರ ನಿಗದಿ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಾಗೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ಏರಿಕೆ ಆಗುತ್ತಿರುವ ಕಾರಣ ಇದೀಗ ಆರ್.ಟಿ.ಪಿ.ಸಿ.ಆರ್ ಮತ್ತು ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ನಡೆಸಲು ಪರಿಷ್ಕೃತ ದರ ನಿಗದಿ ಪಡಿಸಲಾಗಿದೆ. ಸರ್ಕಾರಿ ಕೋವಿಡ್ ಲ್ಯಾಬ್ಗಳಲ್ಲಿ ಸಾಮರ್ಥ್ಯ ಕಡಿಮೆ ಹಾಗೂ ಹೆಚ್ಚು ಸ್ಯಾಂಪಲ್ ಬರುತ್ತಿರುವ ಹಿನ್ನೆಲೆ ಖಾಸಗಿ ಲ್ಯಾಬ್‌ಗಳಿಗೂ ಅನುಮತಿ ನೀಡಲಾಗಿತ್ತು. ಈ ಹಿಂದೆ ಸರ್ಕಾರ 2,500 ರೂಪಾಯಿ ನಿಗದಿ ಮಾಡಲಾಗಿತ್ತು. ಇದೀಗ ದರ ಇಳಿಕೆ ಮಾಡಿದ್ದು ನೇರ ಖಾಸಗಿ ಲ್ಯಾಬ್ಗಳಿಗೆ ಹೋಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ ಇದೀಗ 1,600 ರೂ. ದರ ನಿಗದಿ ಪಡಿಸಲಾಗಿದೆ.
ಕೋವಿಡ್ ಸೋಂಕಿತರಿಗೆ ಕ್ಷಯರೋಗ ಪರೀಕ್ಷೆ: ಕೋವಿಡ್ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ದೇಹದ ಹಲವು ಅಂಗಗಳಿಗೆ ಸಮಸ್ಯೆಯುಂಟು ಮಾಡುತ್ತಿದೆ. ಶ್ವಾಸಕೋಶಕ್ಕೆ ಹೆಚ್ಚು ಹೊಡೆತಕೊಡುವ ಈ ಸೋಂಕನ್ನ ಸೋಂಕಿತರು ಕಡೆಗಣಿಸಿದರೆ ರೋಗದ ತೀವ್ರತೆ ಹೆಚ್ಚಾಗಿ ಇರುತ್ತೆ. ಹೀಗಾಗಿ, ಕೋವಿಡ್-19 ಸೋಂಕಿತರಲ್ಲಿ ಕ್ಷಯರೋಗ ತಪಾಸಣೆ ಮತ್ತು ಕ್ಷಯರೋಗವಿರುವ ವ್ಯಕ್ತಿಗಳಿಗೆ ಕೊರೊನಾ ಪರೀಕ್ಷೆ ಹಾಗೂ ಐಎಲ್ಐ/ಸಾರಿ ಪ್ರಕರಣಗಳಲ್ಲಿ ಕ್ಷಯರೋಗ ಲಕ್ಷಣ ತಪಾಸಣೆ ನಡೆಸುವ ಕುರಿತು ಎಲ್ಲ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಪತ್ರ ಬರೆದಿದೆ.
ಕೋವಿಡ್ ಸಲುವಾಗಿ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವ ಶುಶ್ರೂಷಕರಿಗೆ ಪ್ರೋತ್ಸಾಹ ಧನ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೋವಿಡ್-19 ರ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ ಶುಶ್ರೂಷಕರಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಮಾಸಿಕ 5000 ರೂಪಾಯಿ ಕೋವಿಡ್ ರಿಸ್ಕ್ ಪ್ರೋತ್ಸಾಹ ಧನವನ್ನ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೀಡಲು ಸೂಚಿಸಿದೆ.