ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು: ಸಿಐಡಿ, ಲೋಕಾಯುಕ್ತ ಕಚೇರಿ ಸೀಲ್ ಡೌನ್
ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಸಿಐಡಿ ಹಾಗೂ ಲೋಕಾಯುಕ್ತ ಕಚೇರಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದ ಪರಿಣಾಮ ಮೂರು ದಿನ ಸಿಐಡಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಸಿಐಡಿ ಕೆಲಸ ಮಾಡುತ್ತಿದ್ದ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಹಾಗೂ ಮಹಿಳಾ ಸಿಬ್ಬಂದಿಗೆ ಸೋಂಕು ದೃಢವಾಗುತ್ತಿದ್ದಂತೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮೂವರನ್ನು ನಿಗದಿತ ಅಸ್ಪತ್ರೆಯೊಂದರಲ್ಲಿ ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸುವ ಕೆಲಸ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಬಳಿಕ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುವುದು. ಮುಂಜಾಗ್ರತ ಕ್ರಮವಾಗಿ ಸಿಐಡಿ ಕಚೇರಿ ಪೂರ್ತಿ ಸ್ಯಾನಿಟೈಸ್ ಮಾಡಿ ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಕಾಯುಕ್ತ ಕಚೇರಿಯೂ ಸೀಲ್ ಡೌನ್...
ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ ಆರ್ಪಿ) ಸಿಬ್ಬಂದಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಕೂಡಲೇ ಇಬ್ಬರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಕಚೇರಿಗೆ ರಾಸಾಯನಿಕ ಸಿಂಪಡಿಸಿ ಎರಡು ದಿನ ಸೀಲ್ ಡೌನ್ ಮಾಡಲಾಗಿದೆ.
ಒಂದೇ ದಿನ 11 ಪೊಲೀಸರಿಗೆ ಕೊರೊನಾ...
ಬೆಂಗಳೂರಿನಲ್ಲಿ ಇಂದು ಸೋಂಕಿತ ಪೊಲೀಸರ ಸಂಖ್ಯೆ ಹನ್ನೊಂದಕ್ಕೆ ಏರಿಕೆಯಾಗಿದೆ. ಉಪ್ಪಾರಪೇಟೆ ಸಂಚಾರ ಠಾಣೆಯ ಇಬ್ಬರು, ನಗರ ಪಶ್ಚಿಮ ವಿಭಾಗದ ಸಿಎಆರ್ನ ಓರ್ವ ಕಾನ್ಸ್ಟೇಬಲ್, ಕಾಟನ್ ಪೇಟೆ ಠಾಣೆಯ ಹೆಡ್ ಕಾನ್ಸ್ಟೇಬಲ್, ರಾಜ್ಯ ಅಪರಾಧ ದಾಖಲಾತಿ ವಿಭಾಗದ (ಎಸ್‌ಸಿಆರ್‌ಬಿ) ನಾಲ್ವರಿಗೆ ಕೊರೊನಾ ವಕ್ಕರಿಸಿದೆ. ಈವರೆಗೂ ರಾಜಧಾನಿಯಲ್ಲಿ ಒಟ್ಟು 160ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ದೃಢವಾಗಿದೆ.