ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಬಳಿಕ ನಗರದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದಂತೆ ಜೈಲು ಸೇರುವ ಆರೋಪಿಗಳ ಸಂಖ್ಯೆಯು ಅಧಿಕವಾಗುತ್ತಿದೆ.
ಹೊಸದಾಗಿ ಜೈಲಿಗೆ ಆಗಮಿಸುವ ಮುನ್ನ ಕೈದಿಗಳಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿ, ವರದಿ ನೆಗೆಟಿವ್ ಬಂದ ಬಳಿಕವಷ್ಟೇ ಜೈಲಿಗೆ ಪ್ರವೇಶ ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಕಳೆದ ಒಂದು ತಿಂಗಳಲ್ಲಿ 120 ಕ್ಕಿಂತ ಹೆಚ್ಚು ಕೈದಿಗಳು ಜೈಲು ಪ್ರವೇಶ ಪಡೆದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕೈದಿಗಳನ್ನು ಪಕ್ಕದ ಮಹಿಳಾ ಸೆರೆಮನೆಯ ಪ್ರತ್ಯೇಕ ಬ್ಯಾರಕ್ ನಲ್ಲಿ ಇರಿಸಲಾಗುತ್ತಿದೆ. ಮಹಿಳಾ ಕೈದಿಗಳ ಕಾರಾಗೃಹವು 500 ಮಂದಿ ಸಾಮರ್ಥ್ಯ ಹೊಂದಿದ್ದು, ಪ್ರತಿ ಸೆಲ್ನಲ್ಲಿ ಇಬ್ಬರನ್ನು ಪ್ರತ್ಯೇಕವಾಗಿ ಇರಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.
ಪ್ರತಿಯೊಬ್ಬರಿಗೂ ಸೆಲ್ನಲ್ಲಿ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ. ಪ್ರತಿ ಸೆಲ್ನಲ್ಲೂ ಸ್ಯಾನಿಟೈಸರ್ ಉಪಯೋಗ ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ. ಕೈದಿಗಳ ಭದ್ರತೆಗಿರುವ ಸಿಬ್ಬಂದಿಗೆ ಹೆಚ್ಚು ಸುರಕ್ಷತೆ ಒದಗಿಸಲು ಕೈದಿಗಳ ಜೊತೆ ಮಾತನಾಡದಂತೆಯೂ ತಾಕೀತು ಮಾಡಲಾಗಿದೆ ಎನ್ನಲಾಗಿದೆ.
ಇದೇ ಸಮಯದಲ್ಲಿ ಕೈದಿಗಳು ಒಂದು ಲಕ್ಷ ಮಾಸ್ಕ್ ತಯಾರಿಸಿದ್ದು, ರಾಜ್ಯದ ಎಲ್ಲಾ ಕಾರಾಗೃಹದಲ್ಲಿ ಪ್ರತಿ ಕೈದಿಗೂ ಎರಡೆರಡು ಮಾಸ್ಕ್ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.