ಬೆಂಗಳೂರು: ಮದುವೆ ಸಮಾರಂಭಗಳಲ್ಲಿ 50 ರಿಂದ 100 ಜನಕ್ಕೆ ಮಾತ್ರ ಅವಕಾಶವಿದ್ದರೂ ನಿಯಮ ಕಡೆಗಣಿಸಿ ಮದುವೆ ಮಾಡಲು ಹೋಗಿ ಅನಾಹುತ ಸಂಭವಿಸಿದೆ. ವಿವಾಹ ಸಮಾರಂಭದಲ್ಲಿ ಸೋಂಕು ತಗುಲಿ ವರನ ತಾಯಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ, ಸಹೋದರನಿಗೂ ಸೋಂಕು ಹರಡಿದೆ. ಈ ಘಟನೆ ಮಹದೇವಪುರ ಗ್ರಾಮಾಂತರದಲ್ಲಿ ನಡೆದಿದೆ.
ಮಹದೇವಪುರ ಕ್ಷೇತ್ರದ ಮಂಡೂರು ಸಮೀಪವಿರುವ ಹಂಚರಹಳ್ಳಿ ಗ್ರಾಮದ ಭಾಗ್ಯಮ್ಮ (44) ಇದೇ ತಿಂಗಳು ಏಪ್ರಿಲ್ 5 ಸೋಮವಾರದಂದು ಕೊರೊನಾದಿಂದಾಗಿ ಸಾವನ್ನಪ್ಪಿದ್ದರು. ಕಾಟಂನಲ್ಲೂರಿನ ಸಪ್ತಗಿರಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 30 ಮತ್ತು 31 ರಂದು ಮಗನ ಮದುವೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ನೆರವೇರಿಸಿಕೊಟ್ಟಿದ್ದರು. ಇದಾದ ಎರಡು ದಿನಗಳ ನಂತರ ಆರೋಗ್ಯದಲ್ಲಿ ಏರುಪೇರಾಗಿ ವೈದೇಹಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ ಕಾರಣ, ಸಿವಿ ರಾಮನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಐದನೇ ದಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕೆ.ಆರ್.ಪುರ ತಾಲ್ಲೂಕು ಆಸ್ಪತ್ರೆಯ ಸಿಬ್ಬಂದಿ ಮದುವೆಯಲ್ಲಿ ಪಾಲ್ಗೊಂಡ 56 ಜನರಿಗೆ ಸ್ವಾಬ್ ಟೆಸ್ಟ್ ಮಾಡಿದಾಗ ಇದರಲ್ಲಿ ಮದುಮಗನ ಸಹೋದರನ ಜೊತೆಗೆ ಇಬ್ಬರಿಗೂ ಕೊರೊನಾ ದೃಢಪಟ್ಟಿದೆ. ಇನ್ನುಳಿದ 53 ಜನರ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.
ಮುಂಜಾಗ್ರತಾ ಕ್ರಮವಾಗಿ ಹಂಚರಹಳ್ಳಿ ಗ್ರಾಮದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಗ್ರಾಮದ ಸುತ್ತಲೂ ಸಾನಿಟೈಸರ್ನಿಂದ ಸ್ವಚ್ಛತೆ ಮಾಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿಗಳು ತಿಳಿಸಿದರು.