ಬೆಂಗಳೂರು : ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ವಿಧಾನಸೌಧಕ್ಕೆ ಸಾರ್ವಜನಿಕ ಪ್ರವೇಶಕ್ಕಾಗಿ ನಿರ್ಬಂಧಿಸಲಾಗಿದೆ. ಸಚಿವರುಗಳ ಕಚೇರಿ ಮತ್ತು ಸಚಿವಾಲಯದ ಬಹುತೇಕ ಕಚೇರಿಗಳಲ್ಲಿ, ನಿತ್ಯ ಕೋವಿಡ್-19 ಸೋಂಕಿನ ಪ್ರಕರಣ ವರದಿಯಾಗುತ್ತಿರುವ ಕಾರಣದಿಂದಾಗಿ ಸಚಿವಾಲಯದ ಅಧಿಕಾರಿ/ಸಿಬ್ಬಂದಿ ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಆಡಳಿತದ ಹಿತದೃಷ್ಟಿಯಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶ ನಿಯಂತ್ರಿಸುವ ಅನಿವಾರ್ಯತೆ ಇದೆ.
ಹೀಗಾಗಿ, ಶಕ್ತಿ ಸೌಧದಲ್ಲಿರುವ ಮುಖ್ಯಮಂತ್ರಿಯವರ ಸಚಿವಾಲಯ, ಸಚಿವರ ಹಾಗೂ ಸಚಿವಾಲಯದ ಇಲಾಖೆಗಳಿಂದ ಮುಂಚಿತವಾಗಿ ನಿಗದಿಪಡಿಸಲಾದ ಭೇಟಿ ಹೊರತುಪಡಿಸಿ ಸಾಮಾನ್ಯ ಭೇಟಿಗೆ ಸಾರ್ವಜನಿಕರ ಪ್ರವೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.
ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಲು, ಸಂದರ್ಶಿಸಲು ನಿರ್ದಿಷ್ಟ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆ ಮುಖ್ಯ ಮಂತ್ರಿಯವರ ಸಚಿವಾಲಯ ಹಾಗೂ ಸಚಿವರು ಹಾಗೂ ಸಚಿವಾಲಯದ ಇಲಾಖೆಗಳ ಹಿರಿಯ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದಿರುವ ಸಾರ್ವಜನಿಕರಿಗೆ ಮಾತ್ರ ಪೂರ್ವಾನುಮತಿ ಪತ್ರಗಳನ್ನು ಪರಿಶೀಲಿಸಲಾಗುತ್ತೆ.
ಮಧ್ಯಾಹ್ನ 3.30 ಗಂಟೆಯ ನಂತರ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಮಿತಿಗೊಳಿಸಲಾದ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ. ಇನ್ನು, ಸಚಿವಾಲಯದ ಯಾವುದೇ ಇಲಾಖೆಗಳಲ್ಲಿನ ಕಡತ ವ್ಯವಹರಣೆಯ ಬಗ್ಗೆ ವಿಚಾರಿಸುವ, ಹಿಂಬಾಲಿಸುವ ಕಾರಣಕ್ಕಾಗಿ ಬರುವ ಸಾರ್ವಜನಿಕರ ಪ್ರವೇಶ ಕಡ್ಡಾಯ ನಿರ್ಬಂಧಿಸಲಾಗಿದೆ.
ಜೊತೆಗೆ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳ ಪ್ರತಿ ಮಹಡಿಗಳ ಕಾರಿಡಾರ್‌ನಲ್ಲಿ ಒಟ್ಟಾಗಿ ಗುಂಪು ಸೇರದಂತೆ ನಿಗಾವಹಿಸಲು ಸೂಚಿಸಲಾಗಿದೆ.