ಬೆಂಗಳೂರು: ಕೊರೊನಾದಿಂದ ಬಹುತೇಕ ಎಲ್ಲಾ ಉದ್ಯಮಗಳು ತಟಸ್ಥಗೊಂಡು, ದೇಶದ್ಯಾಂತ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಅನೇಕ ಜನರು ಉದ್ಯೋಗವನ್ನು ಕಳೆದುಕೊಳ್ಳುವಂತಾಯಿತು. ನುರಿತ ಹಾಗೂ ಕೌಶಲ್ಯಭರಿತ ಕೆಲಸಗಾರರಿಗೆ ಈಗಲೂ ಬೇಡಿಕೆ ಇದ್ದು, ಆದರೆ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದು ಉದ್ಯೋಗ ಕೊಡಿಸುವಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ವಿಫಲವಾಗುತ್ತಿವೆ.
ಯುವಕರಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸಲು ಸರ್ಕಾರವು, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ವಿನಿಯಮ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ಕೊರೊನಾ ಬಂದ ಬಳಿಕ ಈ ಎಲ್ಲಾ ಕೇಂದ್ರಗಳು ತಣ್ಣಗಾಗಿದ್ದು, ಸೋಂಕಿನ ಭಯಕ್ಕೆ ಸಿಲುಕಿರುವ ಅಧಿಕಾರಿಗಳು, ಮಾರ್ಚ್ನಿಂದ ಇಲ್ಲಿಯವೆರೆಗೂ ಒಂದೇ ಒಂದು ಉದ್ಯೋಗ ಮೇಳವನ್ನೂ ನಡೆಸಿಲ್ಲ.
ಹಿಂದಿನ ವರ್ಷಗಳಲ್ಲಿ ಜಿಲ್ಲಾವಾರು ಉದ್ಯೋಗ ವಿನಿಮಯ ಕೇಂದ್ರಗಳು ಖಾಸಗಿ ಕಂಪೆನಿಗಳ ಸಹಯೋಗದಲ್ಲಿ ಮೇಳ ನಡೆಸುತ್ತಿದ್ದವು. ಇದರಲ್ಲಿ ಭಾಗವಹಿಸುತ್ತಿದ್ದ ಉದ್ಯೋಗಾಕಾಂಕ್ಷಿಗಳು ತಮ್ಮ ಸಾಮರ್ಥ್ಯಾನುಸಾರ ಕೆಲಸ ಗಿಟ್ಟಿಸುತ್ತಿದ್ದರು. ಆದರೆ ಪ್ರಸಕ್ತ ವರ್ಷ ಸಂಸ್ಥೆಗಳು ನೇಮಕಾತಿ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ಕೂಡ ನಿಷ್ಕ್ರಿಯವಾಗಿವೆ.
ಇನ್ನು ಕೊರೊನಾ ಪೂರ್ವದಲ್ಲಿ ಅಷ್ಟಾಗಿ ಉದ್ಯೋಗ ವಿನಿಮಯ ಕೇಂದ್ರಗಳನ್ನು ಅವಲಂಬಿಸದ, ಯುವಕ ಯುವತಿಯರು ಇದೀಗ ಹೊಸ ಕಂಪನಿಗಳಲ್ಲಿ ಉದ್ಯೋಗ ಹುಡುಕಲು ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸುತ್ತಿದ್ದಾರೆ. ಲಾಕ್‌ಡೌನ್ ಪೂರ್ವದಲ್ಲಿ ದಿನಕ್ಕೆ ಕೇವಲ 7 ರಿಂದ 10 ಜನರು ಉದ್ಯೋಗ ಅರಸಿ ಬರುತ್ತಿದ್ದರು. ಆದರೆ ಇದೀಗ ಜನರಿಗೆ ಕೆಲಸ ಅನಿವಾರ್ಯತೆ ಎದುರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉದೋಗಾಕಾಂಕ್ಷಿಗಳು ಆಗಮಿಸುತ್ತಿದ್ದಾರೆ.
ಇನ್ನು ಕೊರೊನಾ ಹಾವಳಿಯಿಂದ ಸಾಕಷ್ಟು ಕಂಪನಿಗಳು ಬಂದ್ ಆಗಿದ್ದು, ಇನ್ನು ಕಂಪನಿಗಳಲ್ಲಿ 50 ವರ್ಷ ಮೇಲ್ಪಟ್ಟವರನ್ನು ಕೆಲಸದಿಂದ ಕೈ ಬಿಡಲಾಗಿದೆ. ಹೀಗಾಗಿ ಸಾಕಷ್ಟು ಜನರಿಗೆ ನಿರುದ್ಯೋಗ ಸಮಸ್ಯೆ ತಲೆದೂರಿದ್ದು, ಬಹತೇಕ ಜನರು ಉದ್ಯೋಗ ವಿನಿಮಯ ಕೇಂದ್ರಗಳ ಮೊರೆ ಹೋಗಿದ್ದಾರೆ. ತಮ್ಮ ಅರ್ಹತೆ, ಅನುಭವದ ಆಧಾರದ ಮೇಲೆ ಉದ್ಯೋಗಗಳಿಗೆ ಹೆಸರು ನೊಂದಾಯಿಸುತ್ತಿದ್ದಾರೆ. ಇದರಿಂದ ಉದ್ಯೋಗ ವಿನಿಮಯ ಕೇಂದ್ರಗಳಿಗೆ ಒತ್ತಡ ಹೆಚ್ಚಾಗಿದ್ದು, ಐಟಿ ಬಿಟಿಯಿಂದ ಹಿಡಿದು ಪಿಯುಸಿ ಮುಗಿಸಿದ ನಿರುದ್ಯೋಗಿಗಳಿಗೆ ಅವರ ಅರ್ಹತೆಗೆ ತಕ್ಕಂತೆ ಕಂಪನಿ ಹಾಗೂ ಕಚೇರಿಗಳಲ್ಲಿ ಕೆಲಸ ಕೊಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಇನ್ನು ಪ್ರಸಕ್ತ ವರ್ಷ 541 ಕೋಟಿ ರೂಪಾಯಿ ಹಣವನ್ನು ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯ ನಿರ್ವಹಣೆಗೆ ವ್ಯಯಿಸಲಾಗಿದೆ. ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗುವ ಕೌಶಲ ಹೊಂದಿದ್ದಂತಹ ಯುವಕರಿಗೆ ಸ್ವಯಂ ಉದ್ಯೋಗದ ಸಲಹೆ ನೀಡಲಾಗುತ್ತಿದೆ.