ಬೆಂಗಳೂರು: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್, ರಾಜ್ಯಕ್ಕೆ ಎಂಟ್ರಿ ಕೊಟ್ಟಿರಲಿಲ್ಲ ಅಂದಿದ್ದರೆ ಶಾಲಾ- ಕಾಲೇಜುಗಳು ಆರಂಭವಾಗಿ ಇರುತ್ತಿದ್ದವು. ಆಟ- ಪಾಠದ ಜೊತೆ ಜೊತೆಗೆ ಸಹ ಪಠ್ಯಕ್ರಮಗಳು ಶುರುವಾಗುತ್ತಿದ್ದವು. ಆದರೆ, ಇದೀಗ ಅದೆಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ರಾಜ್ಯದಲ್ಲಿ ಪರೀಕ್ಷೆ ನಡೆಸಬೇಕಾ, ಬೇಡವಾ ಎಂಬ ಪ್ರಶ್ನೆಯಿಂದ ಹಿಡಿದು ಇದೀಗ ಶಾಲೆಗಳು ತೆರಯಬೇಕಾ, ಬೇಡವಾ ಎಂಬ ಚರ್ಚೆಗಳು ನಡೆಯುತ್ತಿರುವುದು ಗೊತ್ತಿರುವ ವಿಚಾರ. ಶಾಲೆಗಳಲ್ಲಿ ಪಠ್ಯದ ಜತೆಗೇ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಅಗತ್ಯ.
ನಗರದ ಬಹುತೇಕ ಶಾಲೆಗಳು, ಪಠ್ಯಕ್ರಮದೊಂದಿಗೆ ಇತರೆ ಯಾವುದಾದರೂ ಒಂದು ಚಟುವಟಿಕೆಗಳನ್ನ ಮಕ್ಕಳಿಗೆ ಕಲಿಸುವುದು ಕಡ್ಡಾಯ. ಆರ್ಟ್, ಫಿಟ್ನೆಸ್ ಮತ್ತು ಗೇಮ್ಸ್, ಸ್ಪೋರ್ಟ್ಸ್, ಜಿಮ್ನಾಸ್ಟಿಕ್, ಸ್ವಿಮಿಂಗ್, ಬ್ಯಾಸ್ಕೆಟ್ಬಾಲ್, ಕರಾಟೆ, ಸ್ಕೇಟಿಂಗ್, ಡ್ಯಾನ್ಸ್, ಯೋಗ, ಸಂಗೀತ ವಾದ್ಯ ಕಲಿಕೆ ಹೀಗೆ ಹತ್ತಾರು ಸಹಪಠ್ಯಕ್ರಮಗಳನ್ನ ಅಳವಡಿಸಿಕೊಳ್ಳಲಾಗುತ್ತೆ. ಇದೀಗ ಅವುಗಳನ್ನು ಕಲಿಸುವ ಬೋಧಕರಿಗೂ ಕೊರೊನಾ ಕರಿನೆರಳು ತಾಗಿದೆ.
ಕೊರೊನಾದಿಂದಾಗಿ ಲಾಕ್‌ಡೌನ್ ಜಾರಿ ಮಾಡಲಾಯಿತು. ಇದೀಗ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ದೇವಸ್ಥಾನಗಳು ತೆರೆದಿವೆ. ಮಾಲ್, ಹೋಟೆಲ್, ಜಿಮ್ ಹೀಗೆ ಸ್ಥಗಿತಗೊಂಡಿದ್ದ ಎಲ್ಲವೂ ಪುನಾರಂಭವಾಗುತ್ತಿವೆ. ಆದರೆ, ಶಾಲಾ ಮಕ್ಕಳನ್ನೇ ನೆಚ್ಚಿದ್ದ ಸಹಪಠ್ಯ ಶಿಕ್ಷಕರಿಗೆ ವಿನಾಯಿತಿ ನೀಡಿಲ್ಲ. ಇದರಿಂದಾಗಿ ಅವರೆಲ್ಲ ಸಂಕಷ್ಟದಲ್ಲಿದ್ದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಬಾಡಿಗೆ ಕಟ್ಟಬೇಕು ಜೊತೆಗೆ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಬೇಕು, ಹಣವೆಲ್ಲ ಖಾಲಿ ಆಗುತ್ತಿದೆ. ನಮ್ಮಂತಹ ಕಲಾವಿದ ಶಿಕ್ಷಕರ ಸಹಾಯಕ್ಕೆ ಯಾರು ಇಲ್ಲ ಅಂತಾರೆ ವಿದ್ವಾನ್ ಎಂ ಸ್ವಾಮಿ.
ಮತ್ತೊಬ್ಬರು ಶಿಕ್ಷಕಿ ಮಂಜುಳ ಮಾತನಾಡಿ, ನಮ್ಮ ಕಷ್ಟ ಕೇಳುವವರೇ ಯಾರು ಇಲ್ಲ. ಪರೀಕ್ಷೆ ಮುಗಿದು ಬೇಸಿಗೆ ರಜೆ ಶುರುವಾಗುವ ಸಂದರ್ಭದಲ್ಲೇ ಲಾಕ್‌ಡೌನ್ ಜಾರಿ ಮಾಡಲಾಯಿತು. ನಂತರ ಜೂನ್‌ನಲ್ಲಿ ಶಾಲೆ ತೆರೆಯುವ ಭರವಸೆ ಇತ್ತು. ಬಳಿಕ ಜುಲೈ ಅಂದರು ಇದೀಗ ಅದು ಕೂಡ ಹುಸಿಯಾಗಿದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದು, ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದರು.
ಡ್ಯಾನ್ಸ್ ಕ್ಲಾಸ್‌ನಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕಷ್ಟ : ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡಬೇಕು ಅಂದ್ರೆ ಕೆಲವೊಮ್ಮೆ ಸ್ಪರ್ಶಿಸಲೇಬೇಕಾಗುತ್ತೆ. ಚಿಕ್ಕಮಕ್ಕಳಿಗೆ ಭರತ ನಾಟ್ಯ ಹೇಳಿಕೊಡಬೇಕು ಅಂದರೆ ಹಸ್ತಗಳ ಪರಿಪೂರ್ಣತೆ ಮುಖ್ಯ ಇಂತಹ ಸಂದರ್ಭದಲ್ಲಿ ದೊಡ್ಡವರಿಗೆ ಮಾತಿನಲ್ಲೇ ಹೇಳಬಹುದಾದ್ರೂ ಚಿಕ್ಕವರಿಗೆ ಹೇಳುವುದು ಅಸಾಧ್ಯ. ಇತ್ತ ಮ್ಯುಸಿಕ್ ಕ್ಲಾಸ್ ಆದರೂ ಆನ್ಲೈನ್ ನಲ್ಲಿ ಶುರು ಮಾಡೋಣವೆಂದ್ರೆ ಹಲವರ ಬಳಿ ಸ್ಮಾರ್ಟ್‌ಫೋನ್ ಇದ್ದರೆ, ಸ್ಮಾರ್ಟ್‌ಫೋನ್ ಇಲ್ಲದ ಇನ್ನು ಉಳಿದವರು ಅಲಭ್ಯವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಏನು ಮಾಡಲಾಗದ ಪರಿಸ್ಥಿತಿ ಇದ್ದು ಏನು ಮಾಡೋದು ಬಿಡೋದು ಅನ್ನೋದೇ ತಿಳಿದಿಲ್ಲ ಎಂದು ಅಳಲು ತೋಡಿಕೊಂಡರು.
ಇದನ್ನ ವೃತ್ತಿಯಾಗಿ ಸ್ವೀಕರಿಸಿದ ನಂತರ ಇದೀಗ ಮತ್ತೊಂದು ವೃತ್ತಿ ಆಯ್ಕೆಯು ಕಷ್ಟವಾಗಿದೆ. ಹೀಗಾಗಿ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದ್ದಾರೆ.