ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಸೂರಿಲ್ಲದವರಿಗೆ ಆಸರೆಯಾಗಲು ಹತ್ತು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಇರಿಸಿಕೊಂಡಿದೆ. ಆದರೆ ಇದರ ಅನುಷ್ಠಾನ ಮಾತ್ರ ನಿರೀಕ್ಷಿತ ರೀತಿಯಲ್ಲಿ ಸಾಗುತ್ತಿಲ್ಲ.
ವಸತಿ ಇಲಾಖೆಗೆ ಸಚಿವರಾಗಿ ವಿ.ಸೋಮಣ್ಣ ಅಧಿಕಾರ ಸ್ವೀಕಾರ ಮಾಡಿದ ವೇಳೆ ರಾಜ್ಯದಲ್ಲಿ ನೆರೆ ಹಾನಿ ವ್ಯಾಪಕವಾಗಿ ಸಂಭವಿಸಿದ ಕಾರಣ ವಸತಿ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿತು. ನಂತರದ ದಿನಗಳಲ್ಲಿ ಯೋಜನೆಗಳಿಗೆ ವೇಗ ನೀಡುವ ವೇಳೆ ರಾಜ್ಯದಲ್ಲಿ ಕೊರೊನಾ ಕಾಲಿಟ್ಟು ಲಾಕ್ಡೌನ್ ಘೋಷಣೆ ಮಾಡಲಾಯಿತು. ಇದರಿಂದಾಗಿ ನಾಲ್ಕು ತಿಂಗಳ ಕಾಲ ಸಂಪೂರ್ಣವಾಗಿ ನಿರ್ಮಾಣ ಕಾಮಗಾರಿಗಳೇ ಸ್ಥಗಿತವಾದ ಹಿನ್ನೆಲೆಯಲ್ಲಿ ವಸತಿ ಯೋಜನೆಗಳೂ ಸ್ತಬ್ಧಗೊಂಡಿದ್ದವು. ಇದೀಗ ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡ ನಂತರ ಮತ್ತೆ ವಸತಿ ಯೋಜನೆಗಳ ಅನುಷ್ಠಾನ ಕಾರ್ಯವನ್ನು ಆರಂಭಿಸಲಾಗಿದೆ.
ಯೋಜನೆಗಳ ಪ್ರಗತಿ ವಿವರ:
ರಾಜೀವ್ ಗಾಂಧಿ ವಸತಿ ನಿಗಮ ಯೋಜನೆ ನಿಯಮಿತ 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರ 1.65 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, 8,846 ಮನೆಗಳನ್ನು ನಿರ್ಮಿಸಲಾಗಿದೆ. 2019ರ ಆಗಸ್ಟ್ನಿಂದ 2020ರ ಜೂನ್ವರೆಗೆ ಒಟ್ಟಾರೆ 86,258 ಮನೆಗಳನ್ನು ನಿರ್ಮಿಸಲಾಗಿದ್ದು, 4,298 ಮನೆಗಳ ಹಂಚಿಕೆ ಮಾಡಲಾಗಿದೆ. ಆಗಸ್ಟ್ 2019ರಿಂದ ಜೂನ್ 2020ರವರೆಗೆ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆ ಮತ್ತು ವಾಜಪೇಯಿ ನಗರ ನಿವೇಶನ ಯೋಜನೆಗಳ ಅಡಿ ರಾಜ್ಯಾದ್ಯಂತ 54.57 ಎಕರೆ ಖಾಸಗಿ ಭೂಮಿ ಖರೀದಿಸಲಾಗಿದ್ದು, ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ 2,185 ಎಕರೆ ಸರ್ಕಾರಿ ಜಮೀನನ್ನು ನಿವೇಶನ ಹಂಚಿಕೆಗಾಗಿ ಕಾಯ್ದಿರಿಸಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಕೇಂದ್ರದಿಂದ 60,658 ಮನೆಗಳ ಅನುಮೋದನೆ ಪಡೆದಿದ್ದು, 47,577 ಫಲಾನುಭವಿಗಳಿಗೆ ಸಿ.ಎಲ್.ಎಸ್.ಎಸ್ ಅಡಿ ಮನೆ ಸಾಲದ ಮೇಲೆ ಬಡ್ಡಿ ವಿನಾಯಿತಿ ನೀಡಿದೆ. 2018-19ರಲ್ಲಿ ಕೊಡಗು ಜಿಲ್ಲೆ ಭೂ ಕುಸಿತದಿಂದ ಹಾನಿಗೊಳಗಾದವರಿಗೆ 840 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, 520 ಮನೆ ನಿರ್ಮಾಣ ಪೂರ್ಣಗೊಂಡು 498 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದೆ. ಬೆಂಗಳೂರಿನಲ್ಲಿ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಆರು ಪ್ಯಾಕೇಜ್ಗಳಲ್ಲಿ 28,754 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು, ಈಗಾಗಲೇ 10,500 ಫಲಾನುಭವಿಗಳು ಮನೆಗಳ ಬೇಡಿಕೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕ ಗೃಹ ಮಂಡಳಿಯ ಪ್ರಸ್ತುತ 9 ವಸತಿ ಯೋಜನೆಗಳು ಪ್ರಗತಿ/ಮುಕ್ತಾಯದ ಹಂತದಲ್ಲಿದ್ದು, 781 ಕೋಟಿ ವೆಚ್ಚದಲ್ಲಿ 454 ಮನೆಗಳ ನಿರ್ಮಾಣ ಮತ್ತು 9671 ನಿವೇಶನಗಳನ್ನ ಮಾಡಲಾಗುತ್ತಿದೆ. ವಿವಿಧ ಯೋಜನೆಗಳಿಂದ ವಿವಿಧ ವರ್ಗಗಳ 1,134 ವಸತಿ ನಿವೇಶನ, 380 ಫ್ಲ್ಯಾಟ್, 16 ಸಿಎ ನಿವೇಶನ, 6 ವಾಣಿಜ್ಯ ನಿವೇಶನ ಸೇರಿ ಒಟ್ಟು 1,536 ಸ್ವತ್ತುಗಳನ್ನು 201 ಕೋಟಿ ವೆಚ್ಚದಲ್ಲಿ ಹಂಚಿಕೆ ಮಾಡಲಾಗಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿಯ ರಾಜೀವ್ ಆವಾಸ್ ಯೋಜನೆಯಡಿ 1030.55 ಕೋಟಿ ಮೊತ್ತದಲ್ಲಿ 19,897 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 1,750 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ 10,975 ಕೋಟಿ ವೆಚ್ಚದಲ್ಲಿ 1,80,253 ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಬಿಜೆಪಿ ಸರ್ಕಾರ ಬಂದ ನಂತರ 693.32 ಕೋಟಿ ವೆಚ್ಚದಲ್ಲಿ 13,346 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. 238 ಹೊಸ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿನ ವಸತಿ ಯೋಜನೆಗಳ ಸ್ಥಿತಿಗತಿಗಳ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ಬಡವರಿಗೆ, ಸೂರಿಲ್ಲದವರಿಗೆ ಸೂರು ಒದಗಿಸುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಕಲ್ಪ ಕೂಡ ಇದೇ ಆಗಿದೆ. ಅದರಂತೆ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡು ಬಡವರಿಗೆ 10 ಲಕ್ಷ ಮನೆ ಕಟ್ಟುವ ಕ್ರಿಯಾಯೋಜನೆ ಮಾಡಿ ಈಗಾಗಲೇ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣ ಪ್ರಾರಂಭವಾಗಿವೆ. ಇನ್ನೂ 25-30 ಸಾವಿರ ಮನೆಗಳ ನಿರ್ಮಾಣಕ್ಕೆ ಈ ತಿಂಗಳ ಅಂತ್ಯದಲ್ಲಿ ಚಾಲನೆ ಕೊಡಲಾಗುತ್ತದೆ. ರಾಜ್ಯದ ಮೂಲೆ ಮೂಲೆಯಲ್ಲೂ ವಸತಿ ಯೋಜನೆಯಡಿ ನಿವಾಸಗಳ ನಿರ್ಮಾಣ ಮಾಡಲಿದ್ದೇವೆ ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 5.40 ಲಕ್ಷ ಮನೆಗಳ ನಿರ್ಮಾಣ ನಡೆಯುತ್ತಿದೆ. ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 1.70 ಲಕ್ಷ ಮನೆಗಳ ನಿರ್ಮಾಣ ನಡೆಯುತ್ತಿದೆ. ಏಳೆಂಟು ವರ್ಷದಿಂದ ನಿಂತ ಯೋಜನೆಗೆ ಈಗ ನಾವು ಚಾಲನೆ ಕೊಡುತ್ತಿದ್ದು, ಇನ್ನು ಎರಡು ವರ್ಷದಲ್ಲಿ 10 ಲಕ್ಷ ಮನೆ ನಿರ್ಮಾಣ ಮಾಡುವ ಗುರಿ ಮುಟ್ಟುತ್ತೇವೆ. ದನಿ ಇಲ್ಲದವರಿಗೆ, ಆಸರೆ ಇಲ್ಲದವರಿಗೆ ಮನೆ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ವಸತಿ ಯೋಜನೆಗಳ ಅನುಷ್ಠಾನಕ್ಕೆ ಸದ್ಯದ ಮಟ್ಟಿಗೆ ಹಣಕಾಸು ಸಮಸ್ಯೆ ಇಲ್ಲ. ಆದರೆ ಈ ಬಾರಿ ಲಾಕ್ಡೌನ್ ಕಾರಣದಿಂದ ರಾಜ್ಯದ ಬೊಕ್ಕಸಕ್ಕೆ ಬರಬೇಕಾದ ಆದಾಯ ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಇದರಿಂದ ವಸತಿ ಯೋಜನೆಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.