ಬೆಂಗಳೂರು: ನವರಾತ್ರಿಯ ಒಂಬತ್ತು ದಿನಗಳ ಸಂಭ್ರಮಕ್ಕಾಗಿ ವಾರಕ್ಕೂ ಮೊದಲೇ ತಯಾರಿ ಆರಂಭವಾಗಬೇಕಿತ್ತು ಆದರೆ ಕೊರೊನಾ ವೈರಸ್ ಭೀತಿಯಲ್ಲಿ ಎಲ್ಲವೂ ತಣ್ಣಗಾಗಿದೆ. ಅಂದಹಾಗೆ ನವರಾತ್ರಿಯಲ್ಲಿ ಗೊಂಬೆಗಳ ಖರೀದಿಗೆ ಜನತೆ ಸಮರೋಪಾದಿಯಲ್ಲಿ ಮುಗಿಬೀಳುತ್ತಿದ್ದರು. ಸಿಲಿಕಾನ್ ಸಿಟಿಯಲ್ಲಿ ದಸರಾ ಗೊಂಬೆಗಳ ಮಾರಾಟ ಜೋರಾಗಿಯೇ ಇರುತ್ತಿತ್ತು. ಆದರೆ ಕೊರೊನಾ ಭೀತಿಯಲ್ಲಿ ಅಂಗಡಿಗಳ ಕಡೆ ಗ್ರಾಹಕರು ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ.
ನವರಾತ್ರಿಯಂದು ವಿವಿಧ ಗೊಂಬೆಗಳ ಕೂರಿಸುವ ಸಂಪ್ರದಾಯವಿದೆ. ಇದಕ್ಕಾಗಿಯೇ ಮಲ್ಲೇಶ್ವರಂನ ವರ್ಣ ಸ್ಟೋರ್ನಲ್ಲಿ ಸಾವಿರಾರು ಗೊಂಬೆಗಳು ಬಂದಿದ್ದು, ಗ್ರಾಹಕರಿಗಾಗಿ ಅಂಗಡಿ ಮಾಲಿಕರು ಎದುರು ನೋಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ವರ್ಣ ಸ್ಟೋರ್ನ ಮಾಲಿಕ ಅರುಣ್, ಸುಮಾರು 10 ವರ್ಷದಿಂದ ಗೊಂಬೆಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ಈ ವರ್ಷವೂ ಸುಮಾರು 8 ರಾಜ್ಯಗಳಿಂದ ಅಂದರೆ ರಾಜಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದಿಂದಲೂ ತರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಭಾಗದಿಂದಲೂ ಪರಿಣಿತ ಕಲಾವಿದರಿಂದ ಗ್ರಾಹಕರು ತಿಳಿಸುವ ಹಾಗೇ ಗೊಂಬೆ ತಯಾರಿ ಮಾಡಿಕೊಡಲಾಗುತ್ತೆ ಅಂತ ತಿಳಿಸಿದರು.
ಇನ್ನು 50 ರೂಪಾಯಿಯಿಂದ ಶುರುವಾಗುವ ಗೊಂಬೆಗಳ ಬೆಲೆ ಸಾವಿರದವರೆಗೂ ಇದೆ. ಇನ್ನು ಈ ಬಾರಿ ಕೊರೊನಾ ಕಾರಣಕ್ಕೆ ಶೇ. 20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈಗಷ್ಟೇ ನಿಧಾನಗತಿಯಲ್ಲಿ ಮಾರಾಟ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಚೇತರಿಕೆ ಆಗುವ ಭರವಸೆಯಲ್ಲಿ ಇದ್ದಾರೆ.