ಬೆಂಗಳೂರು: ಕೆಲ ದಿನಗಳ ಹಿಂದೆ ಆರೋಪಿಗೆ ಬಂದಿದ್ದ ಕೊರೊನಾ ಇದೀಗ ಆತನ ಮೂಲಕ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕೋರಮಂಗಲ ಪೊಲೀಸ್ ಠಾಣೆಯ ಮೂವರು ಪೊಲೀಸರಿಗೆ ತಗುಲಿದೆ.
ಅಪರಾಧ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದೆ ಆರೋಪಿಯನ್ನು ಬಂಧಿಸಿ ಸ್ವ್ಯಾಬ್ ಟೆಸ್ಟ್ಗೆ ಒಳಪಡಿಸಿದಾಗ ಕೊರೊನಾ ಇರುವುದು ಪತ್ತೆಯಾಗಿತ್ತು. ಈತನ ಸಂಪರ್ಕದಲ್ಲಿದ್ದ ಪೊಲೀಸರಿಗೂ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಮೂವರು ಸಿಬ್ಬಂದಿಗೆ ಸೋಂಕಿರುವುದಾಗಿ ತಿಳಿದು ಬಂದಿದೆ.
ಇನ್ನು ವರದಿ ಬರುತ್ತಿದ್ದಂತೆ ಠಾಣೆಗೆ ಸ್ಯಾನಿಟೈಸ್ ಮಾಡಲು ಮುಂದಾಗಿದ್ದು, ಸೀಲ್ಡೌನ್ ಮಾಡುವ ಸಾಧ್ಯತೆಯಿದೆ. ಕೊರೊನಾ ಭೀತಿಯಿಂದ ನಗರದ ಬಹುತೇಕ ಪೊಲೀಸ್ ಠಾಣೆಗಳ ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫೀಲ್ಡ್ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಮುಂಜಾಗ್ರತ ಕ್ರಮವಾಗಿ ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಸೇರಿದಂತೆ ಇನ್ನಿತರ ಸಾಧನಗಳನ್ನು ನೀಡಲಾಗಿದೆ.
50 ಕ್ಕಿಂತ ಹೆಚ್ಚಿನ ವಯಸ್ಸಿನ ಪೊಲೀಸರಿಗೆ ವರ್ಕ್ ಫ್ರಂ ಹೋಮ್ ಕಲ್ಪಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.