ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಬಾಗಿಲು ಹಾಕಿದ್ದ ಜಿಮ್ ಸೆಂಟರ್ ಗಳು ಪುನಾರಂಭವಾಗಿದ್ದು, ಪೊಲೀಸ್ ಜಿಮ್ಮರ್ಗಳು ಸಂತಸಗೊಂಡಿದ್ದಾರೆ.
ಕೆಲಸದೊತ್ತಡ ಹಾಗೂ ಮಾನಸಿಕ ಕಿರಿಕಿರಿಯಿಂದ ಬಳಲಿ ಬೆಂಡಾಗಿದ್ದ ಪೊಲೀಸ್ ಜಿಮ್ಮರ್ಗಳಿಗೆ ಜಿಮ್ ಓಪನ್ ಆಗಿರುವುದು ಖುಷಿ ತಂದಿದೆ. ಕೊರೊನಾ ಕಾರಣಕ್ಕಾಗಿ ಐದು ತಿಂಗಳಿಂದ ಜಿಮ್ ಸೆಂಟರ್ಗಳು ಓಪನ್ ಆಗಿರಲಿಲ್ಲ. ಹಂತ-ಹಂತವಾಗಿ ಬೇರೆ ಬೇರೆ ಚಟುವಟಿಕೆಗಳಿಗೆ ಅವಕಾಶ ನೀಡಿದರೂ ಜಿಮ್ ತೆರೆಯುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ. ಇದೀಗ ಆ.5 ರಿಂದ ಜಿಮ್ ಓಪನ್ ಮಾಡಲು ಅನುಮತಿ ಸಿಗುತ್ತಿದ್ದಂತೆ ಪೊಲೀಸರು ಜಿಮ್ನಲ್ಲಿ ವರ್ಕೌಟ್ ಮಾಡಿ ನಿರಾಳರಾಗುತ್ತಿದ್ದಾರೆ.
ಕೊರೊನಾ ಮಹಾಮಾರಿಯಿಂದಾಗಿ ಪೊಲೀಸರು ಪ್ರಾಣ ಕಳೆದುಕೊಂಡಿರುವ ಸಂದರ್ಭದಲ್ಲಿ ಜಿಮ್ ಮಾಡಿ ಆರೋಗ್ಯ ಕಾಪಾಡಿಕೊಂಡರೆ ಕೊರೊನಾ ಬಡಿದೋಡಿಸಬಹುದು ಅನ್ನೋದು ಪೊಲೀಸ್ ಜಿಮ್ಮರ್ಗಳ ಮಾತು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ದೇಹದಾಢ್ಯ ಸ್ಫರ್ಧೆಯಲ್ಲಿ ಸಾಕಷ್ಟು ಪ್ರಶಸ್ತಿಗಳನ್ನ ಗಳಿಸಿರುವ ಶ್ರೀರಾಂಪುರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಶ್ರೀನಿವಾಸ್ ಮೂರ್ತಿ, 4 ತಿಂಗಳಿನಿಂದ ಜಿಮ್ ಇಲ್ಲದೇ ಪರದಾಡಿದ್ದೆವು. ಇದೀಗ ಜಿಮ್ ಓಪನ್ ಆಗಿರೋದ್ರಿಂದ ಮರುಭೂಮಿಯಲ್ಲಿ ನೀರು ಸಿಕ್ಕಂಗಾಗಿದೆ. ಜಿಮ್ ಓಪನ್ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಫಿಟ್ ನೆಸ್ ಗಾಗಿ ಪ್ರಾಮುಖ್ಯತೆ ಕೊಡುತ್ತಿದ್ದ ನಗರದ ಕೆಲ ಪೊಲೀಸರು, ಜಿಮ್ ಇಲ್ಲದೇ ತಮ್ಮ ದೇಹದ ತೂಕ ಹೆಚ್ಚಿಸಿಕೊಂಡು ಬಾಡಿ ಶೇಪ್ ಕಳೆದುಕೊಂಡಿದ್ದರು. ಇದೀಗ ಮತ್ತೆ ಜಿಮ್ ಗಳತ್ತ ಮರಳಿರುವ ಸಿಲಿಕಾನ್ ಸಿಟಿ ಪೊಲೀಸರು ಮತ್ತೆ ಬಾಡಿ ಬಿಲ್ಡಿಂಗ್ ನತ್ತ ಗಮನ ಹರಿಸಿದ್ದಾರೆ. ಸರ್ಕಾರ ಕೆಲವೊಂದು ಸೂಚನೆಗಳನ್ನು ಸೂಚಿಸಿದ್ದು, ಅದನ್ನ ಪಾಲಿಸುತ್ತಾ ಜಿಮ್ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಕೊರೊನಾ ಇನ್ನಿಲ್ಲವಾಗಿಸಬಹುದು ಎನ್ನುತ್ತಾರೆ ಮತ್ತೋರ್ವ ಕಾನ್ ಸ್ಟೇಬಲ್ ನಂದೀಶ್.