ಬೆಂಗಳೂರು: ಭಾರತದ ಮೊದಲ ಸಹಕಾರ ಸಂಘ ಕರ್ನಾಟಕದ ಗದಗದಲ್ಲಿ ಆರಂಭವಾಗಿದೆ. ಅಲ್ಲಿಂದ ಶುರುವಾಗಿರುವ ಸಹಕಾರಿ ಅಂದೋಲನ ಇಂದು ವಿಶ್ವದ ಮುಂದೆ ಬಹಳ ಸದೃಢವಾಗಿ ಬೆಳೆದು ನಿಂತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಯಶಸ್ವಿನಿ ಯೋಜನೆ ಪುನರಾರಂಭ, ಸಹಕಾರ ಸಂಘದ ಸಾಲ ಪಡೆದ ಕೆಲವು ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಸಹಕಾರಿ ರಂಗದಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳು ಆಗುತ್ತಿವೆ. ನೇರವಾಗಿ ಅವರ ಖಾತೆಗೆ ಹಣ ಹೋಗುತ್ತಿದೆ. ಸಹಕಾರಿ ರಂಗ ಇಲ್ಲದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ನೀವೇ ಊಹಿಸಿ. ಇದಕ್ಕಾಗಿಯೇ ಸಹಕಾರಿ ರಂಗ ಅವಶ್ಯಕ. ಕರ್ನಾಟಕದಲ್ಲಿ ಸಹಕಾರಿ ರಂಗ ಬಹಳ ಯಶಸ್ವಿಯಾಗಿದೆ ಎಂದು ಶಾ ಹೇಳಿದರು.
ನರೇಂದ್ರ ಮೋದಿಯವರು ಸಹಕಾರ ಅಂದೋಲನವನ್ನು ಮುಂದುವರೆಸಲು ಸಹಕಾರಿ ಸಚಿವಾಲಯ ಮಾಡಿದ್ದಾರೆ. ಸಚಿವಾಲಯ ಆರಂಭವಾದ ಬಳಿಕ ಸಹಕಾರಿ ಸಂಘಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿವೆ. ಇವತ್ತು ಕೃಷಿ ರಂಗದಲ್ಲಿ ಸಂಪೂರ್ಣವಾಗಿ ಸಹಕಾರಿ ರಂಗ ಅವರಿಸಿಕೊಂಡಿದೆ. ರಾಸಾಯನಿಕಗಳು, ಬಿತ್ತನೆ ಬೀಜ, ಇವೆಲ್ಲದರ ಉತ್ಪಾದನೆ ಸಹಕಾರ ಸಂಘದಿಂದ ಆಗುತ್ತಿದೆ ಎಂದರು.
ಸಹಕಾರಿ ರಂಗ ನಮ್ಮ ಸರ್ಕಾರದಲ್ಲಿ ಹೊಸ ಆಯಾಮವನ್ನು ಪಡೆದುಕೊಳ್ಳಲಿದೆ. ಇದಕ್ಕೆ ನಾನು ಭರವಸೆ ಕೊಡಬಲ್ಲೆ. ಸಹಕಾರಿ ವಿಶ್ವವಿದ್ಯಾಲಯ ಮಾಡುವ ಯೋಚನೆ ಇದೆ. ದೇಶದ ಸಂಪೂರ್ಣ ಮಾಹಿತಿ ಇರುವ ಸಹಕಾರಿ ಡೇಟಾ ಬೇಸ್ ಮಾಡುವ ಅಲೋಚನೆ ಇದೆ ಎಂದು ತಿಳಿಸಿದರು.
ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಹಕಾರ ರಂಗದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ. ನಂಬಿಕೆಯನ್ನು ಉಳಿಸಿಕೊಳ್ಳಲು ಕಟಿಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಸಹಕಾರಿ ರಂಗದಲ್ಲಿ ಸೇವೆ ಮಾಡಬೇಕೇ ವಿನ: ಸಹಕಾರಿ ಸಾಹುಕಾರರಾಗಬಾರದು ಎಂದರು.
ರಾಜ್ಯದ ಆರ್ಥಿಕ ಪ್ರಗತಿಗೆ ಸಹಕಾರ ರಂಗ ದೊಡ್ಡ ಕೊಡುಗೆಯನ್ನು ನೀಡಲು ಸಾಧ್ಯವಿದ್ದು, ಕರ್ನಾಟಕದಲ್ಲಿ ಸಹಕಾರ ಸಾಮರ್ಥ್ಯ ಪೂರ್ಣಪ್ರಮಾಣದಲ್ಲಿ ಬಳಕೆಯಾಗಬೇಕು. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ಗಳಲ್ಲಿ ಸಹಕಾರ ಅತ್ಯಂತ ಯಶಸ್ವಿಯಾಗಿ ಬೆಳೆದಿದೆ. ಹಾಲು ಉತ್ಪಾದನೆ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳು ಸಹಕಾರ ರಂಗದಲ್ಲಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳು, ಕೆಎಂಎಫ್ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಸಹಕಾರ ರಂಗ ನಿಯಂತ್ರಿಸಬಹುದು: ಸಹಕಾರ ಮತ್ತು ಸರ್ಕಾರಗಳ ನಡುವೆ ಅನ್ಯೋನ್ಯ ಸಂಬಂಧದ ಅವಶ್ಯಕತೆ ಇದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಮುಖಾಂತರ ಸಹಕಾರಿ ರಂಗವನ್ನು ಅರ್ಥಪೂರ್ಣಗೊಳಿಸಬಹುದು. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಸಹಕಾರ ರಂಗ ನಿಯಂತ್ರಿಸಲು ಸಾಧ್ಯವಿದ್ದು, ಈ ಬಗ್ಗೆ ಚಿಂತನೆಯಾಗಬೇಕು ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಉತ್ತರ ಕರ್ನಾಟಕದ ಸಮಸ್ಯೆಗಳು ಅಧಿವೇಶನದಲ್ಲಿ ಚರ್ಚೆಯಾಗಿಲ್ಲ: ಡಿಕೆಶಿ