ಬೆಂಗಳೂರು: ಓವರ್ ಸ್ಪೀಡ್ ಚೆಕ್ ಮಾಡುವ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪೇದೆ ಸಾವನ್ನಪ್ಪಿದ ಪ್ರಕರಣದ ವಿಡಿಯೋ ವೈರಲ್ ಆಗಿದೆ.
ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಕೆಲವರು ಮಾನವೀಯತೆ ಮರೆತು ಪೊಲೀಸ್ ಪೇದೆ ಸಾವನ್ನು ಸಂಭ್ರಮಿಸಿರುವ ಘಟನೆ ಕೂಡ ಬೆಳಕಿಗೆ ಬಂದಿದೆ. ಶನಿವಾರ ಸಂಜೆ ಚಿಕ್ಕಜಾಲ ಸಂಚಾರಿ ಠಾಣೆ ಹೆಡ್ ಕಾನ್ಸ್ಟೇಬಲ್ ಧನಂಜಯ್ ಹಾಗೂ ಮತ್ತೋರ್ವ ಕಾನ್ಸ್ಟೇಬಲ್ ಉಮಾಮಹೇಶ್ವರ್ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬಸವನಗುಡಿ ನಿವಾಸಿ ಕಾರು ಚಾಲಕ ಕುಶಾಲ್ ರಾಜ್ ಪೊಲೀಸರ ಕೈಯಿಂದ ತಪ್ಪಿಸುವ ಸಲುವಾಗಿ ವೇಗವಾಗಿ ಬಂದು ರಸ್ತೆ ಬದಿ ನಿಂತಿದ್ದ ಕಾನ್ಸ್ಟೇಬಲ್ಗಳಿಗೆ ಗುದ್ದಿದ್ದಾನೆ. ಪರಿಣಾಮ ಹೆಡ್ ಕಾನ್ಸ್ಟೇಬಲ್ ಧನಂಜಯ್ ಅವರು ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.
ಇದೀಗ ಘಟನೆಯ ವಿಡಿಯೋ ವೈರಲಾಗಿದ್ದು, ಮತ್ತೊಂದಡೆ ಪೊಲೀಸರ ಕುರಿತು ಅವಹೇಳನಕಾರಿ ಹೇಳಿಕೆಗಳು ಕೂಡ ಜೋರಾಗಿದೆ. ಇನ್ನು ಚಿಕ್ಕಜಾಲ ಟ್ರಾಫಿಕ್ ಪೊಲೀಸರಿಂದ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.