ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ವಾಹನಗಳ ಟೋಯಿಂಗ್ ಪ್ರಕ್ರಿಯೆ ಮುಂದುವರೆಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿದಾರರ ಮನವಿಯನ್ನು ಮುಂದಿನ ಆರು ವಾರಗಳಲ್ಲಿ ಪರಿಗಣಿಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಟೋಯಿಂಗ್ಗೆ ಅನುಮತಿ ನೀಡುವಂತೆ ಕೋರಿ ಕರ್ನಾಟಕ ಟೋಯಿಂಗ್ ವಾಹನ ಮಾಲೀಕರು ಮತ್ತು ಕಾರ್ಮಿಕರ ಕ್ಷೇಮಾಭಿವದ್ಧಿ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಅರ್ಜಿದಾರರು 2022ರ ಮೇ 21 ಮತ್ತು 26ರಂದು ಸಲ್ಲಿಸಿರುವ ಮನವಿಗಳನ್ನು ಪರಿಗಣಿಸಲು ಸೂಚಿಸಿ ಅರ್ಜಿ ಇತ್ಯರ್ಥ ಪಡಿಸಿದೆ.
ಸಂವಿಧಾನದ ಪ್ರಕಾರ ಕಲ್ಯಾಣ ರಾಜ್ಯ ಸಂಪೂರ್ಣವಾಗಿ ಸಾಕಾರಗೊಳ್ಳಬೇಕಾಗಿದೆ. ಆದ್ದರಿಂದ ಅರ್ಜಿದಾರರ ಮನವಿಯನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಿ ವಿಳಂಬ ಮಾಡದಂತಾಗಬಾರದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಟೋಯಿಂಗ್ ವಿಚಾರ ಸರ್ಕಾರದ ನೀತಿ ನಿಯಮಾವಳಿಗಳ ನಿರ್ಧಾರವಾಗಿದೆ. ಅಂತಹ ವಿಚಾರಗಳನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶವಿಲ್ಲ. ಅಲ್ಲದೇ, ಅಧಿಕಾರಿಗಳಿಗೆ ಅವರದ್ದೇ ಆದ ವ್ಯಾಪ್ತಿ ಇರಲಿದೆ. ಈ ರೀತಿಯ ವಿಚಾರಗಳಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಪೀಠ, ಸಂವಿಧಾನದ 350ನೇ ಪರಿಚ್ಛೇದದ ಪ್ರಕಾರ, ಪ್ರತಿಯೊಬ್ಬ ಭಾರತೀಯನು ತನ್ನ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪ್ರಾಧಿಕಾರಗಳಿಗೆ ಯಾವುದೇ ಭಾರತೀಯ ಭಾಷೆಯಲ್ಲಿ ಮನವಿ ಸಲ್ಲಿಸಲು ಅವಕಾಶವಿದೆ. 1949ರಲ್ಲಿ ಸಂವಿಧಾನದ 350ನೇ ಪರಿಚ್ಛೇದಕ್ಕೆ ತಿದ್ದಪಡಿ ಮಾಡಿ ಭಾರತದ ಯಾವುದೇ ಭಾಷೆಯಲ್ಲಿ ಮನವಿ ಸಲ್ಲಿಸಿದರು ಪರಿಗಣಿಸಬೇಕು. ಜೊತೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂಬುದಾಗಿದೆ ಉಲ್ಲೇಖಿಸಲಾಗಿದೆ ಎಂದು ಪೀಠ ತಿಳಿಸಿದೆ.
ಕಗ್ಗದ ಸಾಲು ಆದೇಶದಲ್ಲಿ ಉಲ್ಲೇಖ: ಸಾಹಿತಿ ಡಿ.ವಿ.ಗುಂಡಪ್ಪ(ಡಿವಿಜಿ)ಅವರ ಮಂಕುತಿಮ್ಮನ ಕಗ್ಗದ ಸಾಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರ ಹರಿಗೋಲು, ತೆರೆಸುಳಿಗಳತ್ತಿತ್ತು!
ಸುರೆಕುಡಿದವರು ಕೆಲವರು ಹುಟ್ಟು ಹಾಕುವರು!!
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು!
ಉರುಳದಿಹುದಚ್ಚರಿಯೋ! - ಮಂಕುತಿಮ್ಮ!!. ಎಂಬ ಸಾಲು ಆದೇಶದಲ್ಲಿವೆ.
ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರು ನಗರದಲ್ಲಿ ಟೋಯಿಂಗ್ ಕಾರ್ಯ ಮುಂದುವರೆಸಲು ಅವಕಾಶ ನೀಡಬೇಕು. ಟೋಯಿಂಗ್ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಆಂಧ್ರ ಮತ್ತು ತೆಲಂಗಾಣದಲ್ಲಿ ರಾಜ್ಯದಲ್ಲಿ ಪರಿಚಯಿಸಿರುವ ಯೋಜನೆಗಳನ್ನು ಜಾರಿ ಮಾಡಬೇಕು.
ಜೊತೆಗೆ ಟೋಯಿಂಗ್ನಿಂದ ಈಗಾಗಲೇ ಸಂಗ್ರಹಿಸಿರುವ ಮೊತ್ತಕ್ಕೆ ಶೇ.2 ರಷ್ಟು ಬಡ್ಡಿಯೊಂದಿಗೆ ಕಾರ್ಮಿಕರಿಗೆ ಬಿಡುಗಡೆ ಮಾಡುವ ಕುರಿತು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಬೇಕು ಹಾಗೂ ಟೋಯಿಂಗ್ಗೆ ಅನುಮತಿ ನೀಡುವಂತೆ ಕೋರಿ ಕರ್ನಾಟಕ ಟೋಯಿಂಗ್ ವಾಹನ ಮಾಲೀಕರು ಮತ್ತು ಕಾರ್ಮಿಕರ ಕ್ಷೇಮಾಭಿವದ್ಧಿ ಸಂಘ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿತ್ತು.
ಇದನ್ನೂ ಓದಿ: ಹೊಸ ಸರಳೀಕೃತ ವ್ಯವಸ್ಥೆ ಬರುವವರೆಗೆ ನಗರದಲ್ಲಿ ಟೋಯಿಂಗ್ ಸ್ಥಗಿತ: ಸಚಿವ ಆರಗ ಜ್ಞಾನೇಂದ್ರ