ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಾಳೆ ವಿಧಾನಸೌಧ ಬದಲು ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಯಾಕೆ ಅಂತ ಕೇಳಿದಾಗ ಅದನ್ನೂ ಸರ್ಕಾರದ ವಿರುದ್ಧವೇ ಆರೋಪಿಸಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಮುಖ್ಯ ಕಾರ್ಯದರ್ಶಿಗಳು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲು ಪರವಾನಗಿ ನೀಡಿಲ್ಲ. ಇದರಿಂದಾಗಿ ನಾವು ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಮೊದಲು ವಿಧಾನಸೌಧದಲ್ಲಿ ಸಭೆ ನಡೆಸಲು ಸಮ್ಮತಿ ಸೂಚಿಸಿದ್ದು ನಂತರ ಅವಕಾಶವಿಲ್ಲವೆಂದು ತಿಳಿಸಲಾಗಿದೆ. ಇದು ಯಾಕೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.
ಅದ್ಯಾಕೋ ಮುಖ್ಯ ಕಾರ್ಯದರ್ಶಿಗಳು ವಿಧಾನಸೌಧ ಸಮ್ಮೇಳನ ಸಭಾಂಗಣ ವನ್ನು ಪಕ್ಷದ ಶಾಸಕಾಂಗ ಸಭೆಗೆ ನೀಡಲು ಸಾಧ್ಯವಿಲ್ಲ. ಈ ಹಿಂದೆಯೂ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಕೊಡ್ತೀವಿ ಅಂತ ಮೌಖಿಕವಾಗಿ ಹೇಳಿದ್ದರು. ಲಿಖಿತವಾಗಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಹುಶಃ ಇದರಲ್ಲಿ ಕೂಡ ಬಿಜೆಪಿಯವರು ಸಣ್ಣ ರಾಜಕಾರಣ ನಡೆಸಿದ್ದಾರೆ. ಅವಕಾಶ ನೀಡಿಲ್ಲ. ಅದರಿಂದ ಕೆಪಿಸಿಸಿ ಕಚೇರಿಯಲ್ಲಿ ನಡೆಸುತ್ತೇವೆ ಎಂದರು.
ನೆರೆ ಸಮಸ್ಯೆಯಿಂದ ಆದ ನಷ್ಟ ಹಾಗೂ ಪರಿಹಾರ ನೀಡಿಕೆಯಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳ ತಾರತಮ್ಯ ಸೇರಿದಂತೆ ಹಲವು ವಿಚಾರಗಳ ಚರ್ಚೆ ಮಾಡುತ್ತೇವೆ ಎಂದು ವಿವರಿಸಿದರು.
ನಾಳೆಯ ಶಾಸಕಾಂಗ ಪಕ್ಷದ ಸಭೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದೆ. ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಪಾಲ್ಗೊಳ್ಳುತ್ತಿದ್ದು, ಎಲ್ಲಾ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.