ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಜಮೀರ್ ಅಹ್ಮದ್, ಜಯಮಾಲಾ, ಪ್ರಸಾದ್ ಅಬ್ಬಯ್ಯ, ಅಖಂಡ ಶ್ರೀನಿವಾಸ್ ಮೂರ್ತಿ, ಹೆಚ್.ಕೆ.ಪಾಟೀಲ್, ಭೈರತಿ ಸುರೇಶ್, ಅಂಜಲಿ ನಿಂಬಾಳ್ಕರ್, ಬಿ.ಕೆ.ಹರಿಪ್ರಸಾದ್, ನಸೀರ್ ಅಹ್ಮದ್, ಕೊಂಡಜ್ಜಿ, ಪಿ.ಟಿ.ಪರಮೇಶ್ವರ್ ನಾಯ್ಕ, ನಾರಾಯಣಸ್ವಾಮಿ, ವೆಂಕಟರಮಣಯ್ಯ, ಪುಟ್ಟರಂಗ ಶೆಟ್ಟಿ, ನಾರಾಯಸ್ವಾಮಿ, ವೀಣಾ ಅಚ್ಚಯ್ಯ, ಪಿ.ಆರ್.ರಮೇಶ್, ಎಲ್.ಹನುಮಂತಯ್ಯ, ಕೃಷ್ಣಬೈರೇಗೌಡ, ಐವಾನ್ ಡಿಸೋಜಾ, ಕೆ.ಜೆ.ಜಾರ್ಜ್, ಆರ್.ಬಿ.ತಿಮ್ಮಾಪೂರ ಮತ್ತಿತರು ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ಬಗ್ಗೆ ಮಹತ್ವದ ಚರ್ಚೆಯಾಗಲಿದೆ. ನಾಳೆ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕರಾಗಿ ಅಧಿಕೃತ ವ್ಯಕ್ತಿ ಕೂರಬೇಕಿತ್ತು. ಈ ಹಿನ್ನೆಲೆ ಇಂದಿನ ಸಭೆಯಲ್ಲಿ ಈ ಕುರಿತ ಚರ್ಚೆಯೇ ಹೆಚ್ಚಿನ ಮಹತ್ವ ಪಡೆಯಲಿದೆ. ಇದರ ಹೊರತಾಗಿ ನಾಳೆಯಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಬೇಕಾದ ಪ್ರಮುಖ ವಿಚಾರಗಳು, ನಡೆಸಬೇಕಾದ ಹೋರಾಟದ ಕುರಿತು ಚರ್ಚೆ ನಡೆಯಲಿದೆ.
ಇಂದು ರಾತ್ರಿ 9 ಗಂಟೆಗೆ ಅಧಿಕೃತವಾಗಿ ವಿರೋಧ ಪಕ್ಷದ ನಾಯಕನ ಹೆಸರನ್ನು ಎಐಸಿಸಿ ಘೋಷಿಸಲಿದೆ. ಬಹುತೇಕ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗುವುದು ಖಚಿತವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಪರಮೇಶ್ವರ್ ಹಾಗೂ ಹೆಚ್.ಕೆ.ಪಾಟೀಲ್ ನಡುವೆ ಫೈಟ್ ಇದೆ. ಇಬ್ಬರಲ್ಲಿ ಒಬ್ಬರ ಹೆಸರು ಅಂತಿಮ ಪಡಿಸಲಿರುವ ಹೈಕಮಾಂಡ್ ಇಂದು ರಾತ್ರಿ ಹೆಸರು ಅಂತಿಮ ಮಾಡಲಿದೆ.