ಬೆಂಗಳೂರು: ವಿಧಾನಪರಿಷತ್ನ ನಾಲ್ಕು ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಗ್ನೇಯ ವಲಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಇಂದು ನಾಮಪತ್ರ ಸಲ್ಲಿಸಲಿದ್ದು, ಈ ಸಂದರ್ಭ ನಾನು ಕೂಡ ಭಾಗಿಯಾಗಲಿದ್ದೇನೆ. ಎಂಎಲ್ಸಿ ಚುನಾವಣೆಯಲ್ಲಿ ಕೆಲವರಿಗೆ ಜವಾಬ್ದಾರಿ ವಹಿಸಿದ್ದೇನೆ. ನಾವು ಎಂಎಲ್ಸಿ ಚುನಾವಣೆಯನ್ನೂ ಗೆಲ್ತೇವೆ ಎಂದರು.
ಮಾಜಿ ಸಚಿವ ಜಿಟಿಡಿ ಭೇಟಿ ವಿಚಾರ ಮಾತನಾಡಿ, ಸಿಬಿಐ ದಾಳಿಯಾಗಿದ್ದರಿಂದ ಅವರು ಭೇಟಿ ಮಾಡಿದ್ದರು. ನನಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಇದು ಬಿಟ್ಟು ಬೇರೆ ಏನೂ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಎರಡು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಇವತ್ತು ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ. ಚುನಾವಣಾ ಉಸ್ತುವಾರಿಗಳನ್ನೂ ನೇಮಕ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ನಿರ್ಮಲಾನಂದ ಶ್ರೀಗಳ ಭೇಟಿ ವಿಚಾರ ಪ್ರಸ್ತಾಪಿಸಿ, ನಮ್ಮದು ಗುರು-ಶಿಷ್ಯರ ಸಂಬಂಧ. ಅದಕ್ಕೆ ಅವರು ಬಂದು ಧೈರ್ಯ ತುಂಬಿದ್ದಾರೆ ಎಂದರು.
ಇದೇ ಸಂದರ್ಭ ತಮ್ಮ ನಿವಾಸಕ್ಕೆ ಆಗಮಿಸಿದ ಆಗ್ನೇಯ ವಲಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬುಗೆ ಡಿ ಕೆ ಶಿವಕುಮಾರ್ ಬಿ ಫಾರಂ ವಿತರಿಸಿದರು. ಇಂದು ರಮೇಶ್ ಬಾಬು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬಿ ಫಾರಂ ವಿತರಣೆ ಸಂದರ್ಭ ಮಾಜಿ ಡಿಸಿಎಂ ಜಿ ಪರಮೇಶ್ವರ್, ಮಾಜಿ ಸಚಿವ ಯು.ಟಿ. ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಉಪಸ್ಥಿತರಿದ್ದರು.