ಬೆಂಗಳೂರು: ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಿಗ್ಗೆ 9 ಗಂಟೆಗೆ ಸಿಎಲ್‌ಪಿ ಮೀಟಿಂಗ್ ಕರೆದಿದ್ದಾರೆ.
ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದೆ. ಆಡಳಿತ ಪಕ್ಷಕ್ಕೆ ಶಾಕ್ ನೀಡಿಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಲು ಈ ಸಭೆಯಲ್ಲಿ ಸಾಕಷ್ಟು ಸುದೀರ್ಘ ಚರ್ಚೆಗಳು ನಡೆಯಲಿವೆ.
ರಾಜ್ಯದ ಅಭಿವೃದ್ಧಿ ಕೆಲಸಗಳಲ್ಲಿ ಹಿನ್ನಡೆ, ಕೋವಿಡ್ ನಿರ್ವಹಣೆ ವೈಫಲ್ಯ, ಭ್ರಷ್ಟಾಚಾರ, ಅನುದಾನ ಬಿಡುಗಡೆ ವಿಳಂಬ ಸೇರಿ ಬಿಜೆಪಿ ಆಂತರಿಕ ಕಿತ್ತಾಟವೇ ಅಸ್ತ್ರ ಪ್ರತಿ ಪಕ್ಷವಾದ ಕಾಂಗ್ರೆಸ್‌ಗೆ ಸಿಕ್ಕಿದೆ. ಅಲ್ಲದೆ ಇವೆ ವಿಚಾರಗಳ ಈ ಬಾರಿ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಹೋರಾಟದ ಅಸ್ತ್ರವಾಗಲಿವೆ.
ಶಿವಮೊಗ್ಗದ ಹುಣಸವಾಡಿ ಸ್ಫೋಟ ಪ್ರಕರಣದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ರೂಪಿಸಿದ್ದಾರೆ. ಈ ಹಿನ್ನೆಲೆ ಈಗಾಗಲೇ ಸ್ಫೋಟ ನಡೆದ ಸ್ಥಳ ಪರಿಶೀಲನೆ ನಡೆಸಿರುವ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಉತ್ತಮ ಅಸ್ತ್ರಗಳನ್ನೇ ಮುಂದಿಟ್ಟುಕೊಂಡು ಆಡಳಿತ ಪಕ್ಷಕ್ಕೆ ಚಾಟಿ ಬೀಸಲು ಪ್ರತಿಪಕ್ಷ ನಿರ್ಧರಿಸಿದ್ದು ಇಂದಿನ ಶಾಸಕಾಂಗ ಸಭೆಯಲ್ಲಿ ಈ ವಿಚಾರ ಕೂಡ ಆದ್ಯತೆಯ ಮೇರೆಗೆ ಚರ್ಚೆಯಾಗಲಿದೆ.
ರೈತರ ಸಮಸ್ಯೆ, ಕೃಷಿ ಕಾಯ್ದೆಗಳ ಅಸ್ತ್ರ ಬಳಸಿ ಸರ್ಕಾರ ಮಣಿಸಲು ಪ್ರತಿ ಪಕ್ಷ ಮುಂದಾಗಿದೆ. ಜೊತೆಗೆ ಖಾತೆ ಖ್ಯಾತೆಯಿಂದ ಸಮನ್ವಯ ಇಲ್ಲ ಎಂದು ಬಿಂಬಿಸಲು ಸಿದ್ಧತೆ, ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಅನುದಾನದಲ್ಲಿ ಕೊರತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿ ವೇಳೆ ಸಾಕಷ್ಟು ಅನುದಾನ ನೀಡಿದ್ದೇವೆಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಸದನದಲ್ಲಿ ಪ್ರಸ್ತಾಪಿಸುವ ಕುರಿತು ಸಭೆಯಲ್ಲಿ ಶಾಸಕರ ಜೊತೆ ಸಿದ್ದರಾಮಯ್ಯ ಚರ್ಚಿಸಲಿದ್ದಾರೆ.
ಸಿದ್ದರಾಮಯ್ಯ , ಡಿಕೆಶಿ, ಪರಿಷತ್ ವಿಪಕ್ಷ ನಾಯಕರ ಸಮ್ಮುಖದಲ್ಲಿ ಇಂದು ಸುದೀರ್ಘ ಚರ್ಚೆ ನಡೆಯುವ ನಿರೀಕ್ಷೆ ಇದೆ. ಎಲ್ಲಾ ಶಾಸಕರಿಗೆ ನಿಮ್ಮ ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿ ತನ್ನಿ. ಆಯಾ ಸಚಿವರಿಗೆ ನಿಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿ ಇಕ್ಕಟ್ಟಿಗೆ ಸಿಲುಕಿಸಿ ಸರ್ಕಾರವನ್ನು ಮುಜುಗರಕ್ಕೀಡುಮಾಡಲು ತಯಾರಿ ನಡೆಸಲಾಗಿದೆ. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಶಾಸಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.