ಬೆಂಗಳೂರು: ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ರಾಜಭವನ ಮುತ್ತಿಗೆ ಹಾಕಲು ಹೊರಟಿರುವುದು ಖಂಡನೀಯ, ಕಾಂಗ್ರೆಸ್ನ ಅನೇಕರಿಗೆ ಇಡಿ ನೋಟಿಸ್ ನೀಡಿದಾಗ ಇಲ್ಲದ ಪ್ರತಿಭಟನೆ ಈಗೇಕೆ?. ರಾಹುಲ್ ಗಾಂಧಿ ಮಾತ್ರ ಈ ದೇಶದ ಪ್ರಜೆಯಾ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ರಾಜಭವನಕ್ಕೆ ಬೇಕಾದರೂ ಮುತ್ತಿಗೆ ಹಾಕಲಿ ಎಲ್ಲಿಯಾದರೂ ಹಾಕಿಕೊಳ್ಳಲಿ. ರಾಜಭವನದ ಮೇಲೆ ಮುತ್ತಿಗೆ ಹಾಕುವುದರಿಂದ ಯಾವುದೇ ಲಾಭ ಇಲ್ಲ. ಸಾವಿರಾರು ಜನ ನಾಗರೀಕರಿಗೆ ನೋಟಿಸ್ ಹೋಗಿದೆ. ಅಲ್ಲದೇ, ಕಾಂಗ್ರೆಸ್‌ನಲ್ಲಿರುವ ಅನೇಕರಿಗೂ ಇಡಿ ನೋಟಿಸ್ ಹೋಗಿದೆ. ಆಗ್ಯಾಕೆ ಹೋರಾಟ ಮಾಡಲಿಲ್ಲ. ಈಗ ರಾಹುಲ್ ಗಾಂಧಿ ಸರದಿ ಬಂದಾಗ ಮುತ್ತಿಗೆ, ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಕುಟುಂಬ ರಾಜಕಾರಣದ ಕಡೆ ಹೋಗುತ್ತಿದೆ. ಈ ರೀತಿ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.
ಇಡಿ ನೋಟಿಸ್ನಿಂದಾಗಿ ಕಾಂಗ್ರೆಸ್ ನಾಯಕರು ಒಂದು ರೀತಿ ಹತಾಶೆರಾಗಿದ್ದಾರೆ. ರಾಹುಲ್ ಗಾಂಧಿ ದಿನನಿತ್ಯ ಇಡಿ ಡ್ರಿಲ್ಗೆ ಸಿಲುಕಿದ್ದಾರೆ. ನಮ್ಮ ನಾಯಕರೇ ಹೋದರೆ, ನಮಗೆ ದಿಕ್ಕಿಲ್ಲ ಅನ್ನೋ ರೀತಿ ಅವರಿಗೆಲ್ಲಾ ಆಗಿದೆ. ಅದಕ್ಕಾಗಿ ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಜನರ ಹಣದಿಂದ ಮಾಡಿರುವ ಪತ್ರಿಕೆ. ಪತ್ರಿಕೆಯ ಶೇ.80ರಷ್ಟು ಹಣ ಇವರ ಕುಟುಂಬ ಪಡೆಯುತ್ತಿದೆ. ನೆಪಮಾತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಮತ್ತಿಬ್ಬರನ್ನು ಸೇರಿಕೊಂಡಿದ್ದಾರೆ. ಆದರೆ ಈಗ ಇಡಿ ತನಿಖೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಮೇಲೆ ಇಲ್ಲ-ಸಲ್ಲದ್ದನ್ನ ಹೇಳಿ, ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಇಡಿ ದಾಳಿ ಖಂಡಿಸುವ ಭರದಲ್ಲಿ ಕಾಂಗ್ರೆಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ನಲಪಾಡ್, ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ನಲಪಾಡ್ಗೆ ಕನ್ನಡ ಸರಿಯಾಗಿ ಗೊತ್ತಿಲ್ಲ ಅನ್ನಿಸುತ್ತದೆ. ಅವರು ಅಧ್ಯಕ್ಷ ಕನ್ನಡ ಕಲಿಯಲಿ. ತನಿಖೆಯನ್ನು ಅತ್ಯಾಚಾರ ಅನ್ನೋದು ಸರಿಯಲ್ಲ. ಎಲ್ಲಿ ಯಾವ ರೀತಿಯ ಪದ ಬಳಸಬೇಕು ಅನ್ನೋದು ತಿಳಿಯಲಿ. ಓಡು ಮಗ ಓಡು ಮಗ ಓಡು ಅನ್ನೋ ರೀತಿಯಲ್ಲಿ ಎಲ್ಲರೂ ಓಡುದ್ದಾರೆ ಎಂದು ಲೇವಡಿ ಮಾಡಿದರು.
ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಪ್ರಯೋಗ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಗೋಹತ್ಯೆ ನಿಷೇಧಿಸಿದೆ. ಚಿಕ್ಕಮಗಳೂರಿನಲ್ಲಿ ಅಕ್ರಮ ಗೋಮಾಂಸ ಮಾರಾಟ ಕೇಂದ್ರಗಳ ತೆರವು ಮಾಡಲಾಗಿದೆ. ಇದು ಕಾನೂನು ಪ್ರಕಾರವಾಗಿಯೇ ಮಾಡಲಾಗಿದೆ. ಉತ್ತರ ಪ್ರದೇಶದ ಬುಲ್ಡೋಜರ್ ಪ್ರಯೋಗಕ್ಕೂ ಇದಕ್ಕೂ ಸಂಬಂಧ ಇಲ್ಲ. ಉತ್ತರಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವಿಗೆ ಬುಲ್ಡೋಜರ್ ಪ್ರಯೋಗ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: ಚಿಕ್ಕಮಗಳೂರು: ಗೋಮಾಂಸ ತಯಾರಿಕಾ ಅಡ್ಡೆಗಳಿಗೆ ಜೆಸಿಬಿ ಬಿಸಿ, ನಗರಸಭೆ ಕಠಿಣ ಕ್ರಮ