ಬೆಂಗಳೂರು: ರಾಜ್ಯ ಕಾಂಗ್ರೆಸ್ದ ಮಹತ್ವಕಾಂಕ್ಷಿ ಪ್ರಣಾಳಿಕೆಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ವೀಳ್ಯದೆಲೆ ಅಡಕೆ ಹಾಗೂ ಅರಿಶಿನ ಕುಂಕುಮ ಇಟ್ಟು ಸಾಂಪ್ರದಾಯಿಕ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಮತ್ತಿತರರು ಉಪಸ್ಥಿತರಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ಹಿಂದೆ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನೀಡಿದ್ದ 165 ಭರವಸೆಗಳಲ್ಲಿ 158 ಈಡೇರಿಸಿದ್ದೆವು. ನುಡಿದಂತೆ ನಡೆಯುವ ಪಕ್ಷ ಯಾವುದಾದರು ಇದ್ದರೆ ಅದು ಕಾಂಗ್ರೆಸ್. ಆದರೆ ಇದೇ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಅಂಶವನ್ನು ಅವಕಾಶ ಸಿಕ್ಕ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿಲ್ಲ ಎಂದು ಆರೋಪಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಬದಲಾವಣೆ ತರುವ ವಿಚಾರದಲ್ಲಿ ಇಂದು ಅತ್ಯಂತ ಮಹತ್ವದ ದಿನ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಣಾಳಿಕೆ ಬಿಡುಗಡೆ ಆಗಿದೆ. ಸಂಪೂರ್ಣ ರಾಜ್ಯದ ಅಭಿವೃದ್ಧಿಗೆ ಇದು ಪೂರಕವಾಗಿದೆ ಎಂದು ಭರವಸೆ ನೀಡಿದರು .
ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಶೇಕಡಾ 40ಕ್ಕಿಂತ ಹೆಚ್ಚು ಜನ ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಬೆಂಗಳೂರು ನಗರದಲ್ಲಿ ಶೇ 30ರಷ್ಟು ಜನ ಇದ್ದಾರೆ. ಇದರಿಂದ ಬೆಂಗಳೂರು ನಗರದ ಅಭಿವೃದ್ಧಿಯನ್ನು ಪ್ರಮುಖ ಉದ್ದೇಶ ಇಟ್ಟುಕೊಂಡು ಚಿಂತನೆ ನಡೆಸಿದ್ದೇವೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಅಭಿವೃದ್ಧಿ ಮಾಡಲಾಗುವುದು. ಭ್ರಷ್ಟಾಚಾರ ರಹಿತ ಜನಪರ ಸರ್ಕಾರ ನೀಡುವುದು ನಮ್ಮ ಗುರಿ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹಿಂದೆ ಬಿಜೆಪಿಯವರು ಸಹ 600 ಭರವಸೆ ನೀಡಿದ್ದರು. ಆದರೆ, ಈಡೇರಿಸಿದ್ದು 55 ಮಾತ್ರ. 3 ವರ್ಷ 10 ತಿಂಗಳು ಅಧಿಕಾರದಲ್ಲಿದ್ದರು. ಈ ಸಾರಿ ನೀಡಿದ ಭರವಸೆ ಸಹ ಅವರು ಈಡೇರಿಸುವುದಿಲ್ಲ. ರೈತರಿಗೆ ನೀಡಿದ ಯಾವೊಂದು ಭರವಸೆ ಈಡೇರಿಸಿಲ್ಲ ಎಂದು ಆಪಾದನೆ ಮಾಡಿದರು. ಕಾಂಗ್ರೆಸ್ ಪಕ್ಷ ತನ್ನ ಬದ್ಧತೆ ಉಳಿಸಿಕೊಂಡಿದೆ. ತೆಲಂಗಾಣ ರಾಜ್ಯಗಳ ನಂತರ ಕರ್ನಾಟಕದಲ್ಲಿ ನಾವು ಎಸಿಪಿಟಿಎಸ್‌ಪಿ ಕಾಯ್ದೆ ಜಾರಿಗೆ ತಂದೆವು. 30,000 ಕೋಟಿ ರೂ ಮೊತ್ತವನ್ನು ಇದಕ್ಕಾಗಿ ಬಜೆಟ್ನಲ್ಲಿ ಮೀಸಲಿಟ್ಟಿದ್ದೆವು. ಈ ಸಾರಿ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಪಂಗಡಗಳಿಗೆ ಬಿಜೆಪಿ ಸರ್ಕಾರ ನೀಡಿದ ಅನುದಾನ ಗಮನಿಸಿದರೆ ಅವರಿಗೆ ಹಿಂದುಳಿದ ವರ್ಗದವರ ಪರವಾಗಿ ಆಸಕ್ತಿ ಇಲ್ಲ ಎನ್ನುವುದು ಕಾಣುತ್ತದೆ ಎಂದು ಹರಿಹಾಯ್ದರು.
ನಾವು ಮೀಸಲಾತಿಗೆ ಕಾನೂನು ಬಲ ನೀಡ್ತೇವೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇಕಡ 50ರಷ್ಟು ಇರುವ ಮೀಸಲಾತಿಯನ್ನು 75ಕ್ಕೆ ಏರಿಕೆ ಮಾಡುತ್ತೇವೆ. ಮೀಸಲಾತಿ ಜಾರಿಗೆ ತಂದಿರುವುದಲ್ಲ, ಒಂಬತ್ತನೇ ಶೆಡ್ಯೂಲ್ಗೆ ಸೇರಿಸಿ ಕಾನೂನು ಬಲ ಕೊಡಬೇಕಾಗುತ್ತದೆ. ಇಲ್ಲವಾದರೆ ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸರ್ವೆ ಮಾಡಿದ್ದೆವು. ಇದಕ್ಕೆ 165 ಕೋಟಿ ವೆಚ್ಚ ಮಾಡಿದ್ದೆವು. ನಮ್ಮ ಅವಧಿಯಲ್ಲಿ ಅದು ಸಿದ್ಧವಾಗಿರಲಿಲ್ಲ ಕುಮಾರಸ್ವಾಮಿ ಅದನ್ನ ಜಾರಿಗೆ ತರುವ ಪ್ರಯತ್ನ ಮಾಡಲಿಲ್ಲ. ಕಾಂತರಾಜು ನೇತೃತ್ವದ ಆಯೋಗ ನೀಡಿರುವ ವರದಿ ಸರ್ಕಾರದ ಬಳಿಯಿದ್ದು ಬಿಜೆಪಿ ಸರ್ಕಾರ ಅದನ್ನು ಜಾರಿಗೆ ತರಬೇಕಿತ್ತು. ಆದರೆ ಬಡವರ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ವರದಿಯನ್ನು ತರಿಸಿಕೊಂಡು ಸಾಮಾಜಿಕ ನ್ಯಾಯ ಆಧರಿಸಿ ಕಾಯ್ದೆ ಜಾರಿಗೆ ತರುವ ಕಾರ್ಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂಓದಿ:ವಿದ್ಯುತ್ ಉಳಿಸಲು ಸರ್ಕಾರಿ ಕಚೇರಿಗಳ ಸಮಯ ಬದಲಿಸಿದ ಪಂಜಾಬ್; 7.30ಕ್ಕೇ ಕಚೇರಿ ತಲುಪಿದ ಸಿಎಂ