ಬೆಂಗಳೂರು: ರಾಜ್ಯ ಸರ್ಕಾರದ ಇತ್ತೀಚಿನ ನಿಲುವು ಖಂಡಿಸಿ ಕಾಂಗ್ರೆಸ್ ಪಕ್ಷ ಇಂದು ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿತು.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ರಾಜ್ಯ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯ್ತು.
ವಿಧಾನಸೌಧ, ವಿಕಾಸಸೌಧ ಮಧ್ಯೆ ಇರುವ ಗಾಂಧಿ ಪ್ರತಿಮೆ ಮುಂಭಾಗ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಎಸ್.ಆರ್.ಪಾಟೀಲ್, ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಪುಷ್ಪ ಅಮರನಾಥ್, ಹೆಚ್.ಆಂಜನೇಯ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸುತ್ತಿರುವ ಅನುಮಾನ ಮೂಡಿದೆ. ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ನಡೆಯುತ್ತಿರುವ ಹಿನ್ನೆಲೆ 50ಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ ಪ್ರತಿಭಟನೆ ನಡೆಸುವಂತೆ ಇಲ್ಲ ಎಂಬ ನಿಯಮವನ್ನು ಕೂಡ ಕಾಂಗ್ರೆಸ್ ಗಾಳಿಗೆ ತೂರಿದ್ದು ಕಂಡು ಬಂತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ. ಶಾಸಕಾಂಗ ಪಕ್ಷದ ಸಭೆ ಕರೆದಿದ್ದೆವು. ಆದರೆ ಸಭೆ ನಡೆಸಲು ನಮಗೆ ಅವಕಾಶ ನೀಡಿಲ್ಲ. 20 ಲಕ್ಷ ಕೋಟಿ ಪ್ಯಾಕೇಜ್ ಬೋಗಸ್ ಪ್ಯಾಕೇಜ್. ಒಂದು ರೂ. ಪ್ಯಾಕೇಜ್ ಹಣ ಕೂಡಾ ತಲುಪಿಲ್ಲ. ಒಬ್ಬ ಫಲಾನುಭವಿಗೂ 1 ಸಾವಿರ ತಲುಪಿಲ್ಲ ಎಂದರು.
ಬ್ಯಾಂಕ್ ಸಾಲ ನೀಡಲು ಸರ್ಕಾರದ ಅವಶ್ಯಕತೆ ಇಲ್ಲ. ಯಾವ ರೀತಿಯಲ್ಲೂ ಸರ್ಕಾರ ಸಹಾಯ ಮಾಡಿಲ್ಲ. ಬಜೆಟ್ನಲ್ಲಿರುವ ಯೋಜನೆಗಳನ್ನು ತಿರುಚಿ ಶಹಬ್ಬಾಸ್ಗಿರಿ ತೆಗೆದುಕೊಳ್ಳಲು ಯತ್ನ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ. ಬರೀ ಬೋಗಸ್ ಯೋಜನೆ ಪ್ರಕಟಿಸುತ್ತವೆ. ಪಂಚಾಯತ್ ಚುನಾವಣೆ ಮಾಡುತ್ತಿಲ್ಲ. ಅವರ ಪಕ್ಷದ ಕಾರ್ಯಕರ್ತರ ನಾಮ ನಿರ್ದೇಶನ ಮಾಡಲು ಹುನ್ನಾರ ನಡೆದಿದೆ. ಚುನಾವಣೆ ನಡೆಸಿಲ್ಲ ಅಂದರೆ ಇರುವ ಸದಸ್ಯರನ್ನು ಮುಂದುವರಿಸಿ. ಜನ ವಿರೋಧಿ ನೀತಿ ಇದು. ಕೂಡಲೇ ಎಪಿಎಂಸಿ ಕಾಯ್ದೆ ವಾಪಸ್ ಪಡೆಯಲಿ. ಕೇವಲ 3 ಲಕ್ಷ ಫುಡ್ ಕಿಟ್ ಕೊಟ್ಟಿದ್ದಾರೆ. 50 ಲಕ್ಷ ಕಾರ್ಮಿಕರಿದ್ದರು. ಅವರಿಗೆ ಆಹಾರ ಸಾಮಗ್ರಿ ಕೊಟ್ಟಿಲ್ಲ. ಕೊರೊನಾ ತಡೆಯಲು ಕೇಂದ್ರ ವಿಫಲವಾಗಿದೆ. ಮೊದಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿಲ್ಲ. ನಿಮಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇದುವರೆಗೂ ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲ ಕೊಟ್ಟಿದ್ದೇವೆ. ಬಹಳ ದಿನ ಅನ್ಯಾಯವನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರಕ್ಕೆ ಸಾಕಷ್ಟು ಸಲಹೆ ಕೊಟ್ಟಿದ್ದೇನೆ. ಸಿಎಂಗೆ ನಾನು 15ರಿಂದ 20 ಪತ್ರಗಳನ್ನ ಬರೆದಿದ್ದೀನೆ. ಸೌಜನ್ಯಕ್ಕದ್ರೂ ಒಂದೇ ಒಂದು ಉತ್ತರ ನನಗೆ ಸಿಎಂ ಯಡಿಯೂರಪ್ಪ ಕೊಟ್ಟಿಲ್ಲ. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮೊದಲು ತಬ್ಲಿಘಿಗಳಿಂದ ರೋಗ ಬಂದಿದೆ ಅಂದ್ರು. ಈಗ ಮುಂಬೈನಿಂದ ಬಂದವರಿಂದ ಬಂದಿದೆ ಅನ್ನುತ್ತಾರೆ. ನಮ್ಮ ಕಾರ್ಮಿಕರು ನಮ್ಮ ರಾಜ್ಯಕ್ಕೆ ಬರಲಿ. ಅವರನ್ನ ಮೊದಲೇ ಟೆಸ್ಟ್ ಮಾಡಿ, ಹೊರಗಿನ ಭಾಗದಲ್ಲಿ ಕ್ವಾರಂಟೈನ್ ಮಾಡಬೇಕಿತ್ತು. ಕೊರೊನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು.
ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯ ನಿರ್ಣಯದಂತೆ ಇಂದು ಪ್ರತಿಭಟನೆ ಮಾಡಿದ್ದೇವೆ. ಸೆ. 144 ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮನ್ನು ದಸ್ತಗಿರಿ ಮಾಡಿದ್ರೆ ಮಾಡ್ಲಿ. ದೇಶದ ಜನರಿಗೆ ಟೋಪಿ ಹಾಕ್ತಿದ್ದಾರೆ. ಇದನ್ನು ನೋಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ವಿರೋಧ ಪಕ್ಷವಾಗಿ ಸಲಹೆ ಸೂಚನೆಗಳನ್ನು ನೀಡಿದ್ದೇವೆ. 15-20 ಪತ್ರಗಳನ್ನೂ ಬರೆದಿದ್ದೇವೆ. ಅವೇನೂ ಸ್ನೇಹ ಪತ್ರಗಳಲ್ಲ. ಜನತೆಯ ಆರೋಗ್ಯ ಕುರಿತ ಪತ್ರಗಳು. ಕಾರ್ಮಿಕರು, ರೈತರನ್ನು ಸರಿಯಾಗಿ ನೋಡಿಕೋಳ್ತಿಲ್ಲ. ಕಾರ್ಮಿಕರನ್ನು ಸರಿಯಾಗಿ ಸರ್ಕಾರ ನೋಡ್ಕೊಂಡಿದ್ರೆ ಅವರು ರಾಜ್ಯ ಬಿಟ್ಟು ಹೋಗ್ತಿರಲಿಲ್ಲ.
ತಬ್ಲಿಘಿಗಳಿಂದ ಕೊರೊನಾ ಬಂದಿದೆ ಅಂತಿದ್ರು. ಈಗ ಮಹಾರಾಷ್ಟ್ರದಿಂದ ಬಂದಿದೆ ಅಂತಾರೆ. ಸರ್ಕಾರ ಏನ್ಮಾಡ್ತಿತ್ತು? ಅವರು ಎಲ್ಲಿದ್ದಾದರೂ ಬರಲಿ. ಸರ್ಕಾರ ಕೊರೊನಾ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು, ಸಾಂಪ್ರದಾಯಿಕ ಕಸುಬು ಮಾಡುವವರ ಬದುಕು ದುಸ್ತರವಾಗಿದೆ. ಅವರಿಗೂ ಈ ಸರ್ಕಾರ ಏನೂ ಮಾಡಲಿಲ್ಲ. 22 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಏನೂ ಮಾಡಿಲ್ಲ ಎಂದರು.
ಯಡಿಯೂರಪ್ಪ ಅವರಿಗೆ ಬಡವರ ಮೇಲೂ ಕಾಳಜಿ ಇಲ್ಲ. ಬಡವರು, ಕಾರ್ಮಿಕರು, ಮಹಿಳೆಯರ ಮೇಲೆ ಕಾಳಜಿ ಇಲ್ಲ. ಇದೊಂದು ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ ಎಂದರು.