ಬೆಂಗಳೂರು: ದೇಶದಲ್ಲಿಯೇ ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು, ಎಲ್ಲಾ ವಿಚಾರಗಳಲ್ಲಿಯೂ ಕೇಂದ್ರೀಕೃತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯ ಬೆಳಗಾವಿ ಮುಖಂಡ ಈರಣ್ಣ ಕಡಾಡಿ ಅವರಿಗೆ ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ಘೋಷಣೆ ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ನಮ್ಮ ಜಿಲ್ಲೆಯ ಮುಖಂಡರಿಗೆ ರಾಜ್ಯಸಭೆ ಟಿಕೆಟ್ ನೀಡಿದ್ದಾರೆ. ಅದು ಆ ಪಕ್ಷದ ನಿರ್ಧಾರಕ್ಕೆ ಬಿಟ್ಟದ್ದು. ಅವರ ನಿರ್ಧಾರಕ್ಕೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ಜಿಲ್ಲೆಗೆ ಆಳಲು ಅವಕಾಶ ಲಭಿಸಿದೆ, ಆಳುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಕೇವಲ ಒಬ್ಬರೇ ಅಭ್ಯರ್ಥಿ ಎಂದು ಪಕ್ಷವೇ ತೀರ್ಮಾನಿಸಿದ್ದು, ಖರ್ಗೆ ಅವರನ್ನು ಹೊರತುಪಡಿಸಿ ಬೇರೆ ಯಾರೂ ಕಣಕ್ಕಿಳಿಯುವುದಿಲ್ಲ. ಜೆಡಿಎಸ್ನಿಂದ ಕಣಕ್ಕಿಳಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಬೆಂಬಲಿಸುವಂತೆ ಪಕ್ಷದಿಂದ ಯಾವುದೇ ಸೂಚನೆ ನೀಡಿಲ್ಲ. ನೀಡಿದರೆ ನೋಡೋಣ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಟ್ವೀಟ್ನಲ್ಲಿ ತಿಳಿಸಿರಲಿ. ಆದರೆ ನಮ್ಮ ಪಕ್ಷದ ನಿರ್ಧಾರ ಏನು ಎನ್ನುವುದನ್ನು ನಮ್ಮ ನಾಯಕರು ತಿಳಿಸಬೇಕು. ನಂತರ ಯೋಚಿಸೋಣ ಎಂದರು.
ನಾಮಪತ್ರ ಸಲ್ಲಿಸಲು ಕೇವಲ 10 ಸೂಚಕರು ಇದ್ದರೆ ಸಾಕು. ನಾಮಪತ್ರ ಸಲ್ಲಿಕೆ ಮಾಡಲು ಅವರಿಗೆ ಸಮಸ್ಯೆ ಇಲ್ಲ. ಚುನಾವಣೆ ನಡೆದರೆ ಮಾತ್ರ ಮತದಾನ ಹಾಗೂ ಯಾವ ಪಕ್ಷದ ಮತದ ಬೆಂಬಲ ಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆ ಅಥವಾ ಮತದಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿ ಕೂಡ ಇಬ್ಬರೇ ಅಭ್ಯರ್ಥಿಗಳನ್ನು ಘೋಷಿಸಿರುವ ಹಿನ್ನೆಲೆ ಚುನಾವಣೆ ನಡೆಯುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದರು. ನಮ್ಮ ಪಕ್ಷ ಸೂಚಿಸಿದರೆ ನಾವು ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತೇವೆ. ಅವರು ಏನೇ ಹೇಳಿಕೊಂಡರೂ ಅದು ನಮ್ಮ ಪ್ರತಿಪಾದನೆ ಆಗಿರುವುದಿಲ್ಲ. ಚುನಾವಣೆ ಅನಿವಾರ್ಯವಾದರೆ ಪಕ್ಷದ ಹೈಕಮಾಂಡ್ ಸೂಚಿಸುವ ರೀತಿ ನಡೆದುಕೊಳ್ಳುತ್ತೇವೆ ಎಂದರು.