ಬೆಂಗಳೂರು: ರಾಜ್ಯ ಸರ್ಕಾರದ ಚುನಾವಣಾ ಪೂರ್ವ ಬಜೆಟ್ ಮಂಡನೆಯಾಗಿದ್ದು, ಇದರ ಮೇಲಿನ ಚರ್ಚೆ ಹಾಗೂ ಅನುಮೋದನೆ ಬಳಿಕ ಸದನದ ಹೊರಗೆ ಯಾವ ವಿಧದ ಹೋರಾಟ ಕೈಗೊಳ್ಳಬೇಕೆಂಬ ಚಿಂತನೆಯನ್ನು ಕಾಂಗ್ರೆಸ್ ಪಕ್ಷ ಆರಂಭಿಸಿದೆ. ಈಗಾಗಲೇ ಬಜೆಟ್ ಮಂಡನೆ ಸಂದರ್ಭ ಉಭಯ ಸದನಗಳಲ್ಲಿಯೂ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಹೂವಿಟ್ಟುಕೊಂಡು ಬಂದು ಸರ್ಕಾರದ ಬಜೆಟ್ ಅನ್ನು ಲೇವಡಿ ಮಾಡಿ ಗಮನ ಸೆಳೆದಿದ್ದರು.
ಇದೀಗ ಕೈ ನಾಯಕರು ಸೋಮವಾರದಿಂದ ಐದು ದಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸರ್ಕಾರಕ್ಕೆ ಮುಜುಗರ ತರಲು ತೀರ್ಮಾನಿಸಿದ್ದಾರೆ. ಅನಿವಾರ್ಯವಾದರೆ ಮಾತ್ರ ಗಲಾಟೆ ನಡೆಸಲು ನಿರ್ಧರಿಸಿದ್ದು, ಇಲ್ಲವಾದರೆ ಸುಗಮವಾಗಿ ಕಲಾಪ ಸಾಗುವಂತೆ ಮಾಡಿ, ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧತೆ ನಡೆಸಿದೆ.
ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ತಯಾರಿ ನಡೆಸಿದ್ದು, ಈ ಸಂದರ್ಭದಲ್ಲಿ ಜನರ ದೃಷ್ಟಿಯಲ್ಲಿ ಕೀಳಾಗಿ ಕಾಣಿಸಿಕೊಳ್ಳಬಾರದು ಎಂಬ ಎಚ್ಚರಿಕೆ ವಹಿಸಿದೆ. ಅಲ್ಲದೇ ಜನರ ದೃಷ್ಟಿಯಲ್ಲಿ ಒಂದು ಉತ್ತಮರಾಗಿ ಕಾಣಿಸಿಕೊಳ್ಳುವ ಜೊತೆಗೆ ಬಿಜೆಪಿ ಸರ್ಕಾರ ಜನರಿಗಾಗಿ ಏನೂ ಮಾಡಿಲ್ಲ ಎನ್ನುವುದನ್ನು ವಿವರಿಸುವ ಯತ್ನ ಮಾಡಲು ಮುಂದಾಗಿದೆ. ಪಕ್ಷದ ನಾಯಕರು ಈಗಾಗಲೇ ಈ ನಿಟ್ಟಿನಲ್ಲಿ ಚರ್ಚಿಸಿದ್ದು, ನಿನ್ನೆಯ ಶಾಸಕಾಂಗ ಸಭೆಯಲ್ಲೂ ಇದೇ ವಿಚಾರವಾಗಿ ಚರ್ಚೆ ನಡೆದಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಆಂತರಿಕ ಸಮೀಕ್ಷಾ ವರದಿ ನಡೆಸಿ ಫಲಿತಾಂಶ ಪಡೆದಿದ್ದು, ಕೊಂಚ ಸುಧಾರಣೆ ಇರುವುದು ತಿಳಿದಿರುವುದರಿಂದ ಇನ್ನು ಕೊಂಚ ಪ್ರಯತ್ನ ಮಾಡಿದರೆ ಅಧಿಕಾರಕ್ಕೆ ಬರಬಹುದು ಎಂಬ ವಿಶ್ವಾಸ ಹೊಂದಿದೆ. ಕನಿಷ್ಠ 150 ಸ್ಥಾನ ಪಡೆಯುವಂತೆ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯದಲ್ಲೇ ಬೀಡು ಬಿಟ್ಟಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ನಾಯಕರೂ ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ: ಬಸವನಗುಡಿಯಿಂದ ಎಂಎಲ್ಸಿ ಯು.ಬಿ. ವೆಂಕಟೇಶ್ಗೆ ಟಿಕೆಟ್ ಫೈನಲ್!?
ರಾಜ್ಯದ ಜನಪ್ರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವ ಮುನ್ನ ಪಕ್ಷದ ರಾಷ್ಟ್ರೀಯ ನಾಯಕರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಭರವಸೆ ನೀಡಿದ್ದಾರೆ. ಈ ಎಲ್ಲಾ ಕಾರಣದಿಂದ ಕಾಂಗ್ರೆಸ್ ಪಾಲಿಗೆ ಕರ್ನಾಟಕದ ವಿಧಾನಸಭೆ ಚುನಾವಣೆ ಗೆಲುವು ಅನಿವಾರ್ಯವಾಗಿದೆ.
ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರ ಹಿತ ಮರೆತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಇದೀಗ ಅದನ್ನು ಜನರಿಗೆ ಮನಮುಟ್ಟುವಂತೆ ಹೇಳಬೇಕಿದೆ. ಅಲ್ಲದೇ ಸರ್ಕಾರದ ಘೋಷಣೆಗಳು, ಮೀಸಲಾತಿ ನೀಡಿಕೆ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಬಿಜೆಪಿಗೆ ಜನರ ಪರ ಕಾಳಜಿ ಇಲ್ಲ. ಕೇವಲ ಮತ ಬ್ಯಾಂಕ್ ಆಗಿ ಈ ಕಾರ್ಯ ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸಲು ಕೈ ನಾಯಕರು ಯತ್ನಿಸುತ್ತಿದ್ದಾರೆ. ಇದನ್ನು ಅತ್ಯಂತ ನಿರ್ಭೀತಿಯಿಂದ ಹಾಗೂ ಮನ ಮುಟ್ಟುವಂತೆ ಜನರಿಗೆ ತಿಳಿಸುವುದು ಕಾಂಗ್ರೆಸ್ ನಾಯಕರಿಗೆ ಇರುವ ಸವಾಲು. ಹಿಂದೆ ತಮ್ಮ ಜನಪ್ರಿಯ ಕಾರ್ಯಕ್ರಮಗಳನ್ನೇ ಜನರಿಗೆ ತಿಳಿಸಲಾಗದೇ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಈಗ ಮತ್ತೊಮ್ಮೆ ಅಧಿಕಾರ ಕೈವಶ ಮಾಡಿಕೊಳ್ಳುವ ಯತ್ನದಲ್ಲಿದೆ.
ಮುಂದಿನ ವಾರದ ಬಳಿಕ ಇನ್ನಷ್ಟು ಗಂಭೀರವಾಗಿ ಬಸ್ ಯಾತ್ರೆಯನ್ನು ನಡೆಸುವುದು, ಜನರ ಬಳಿಗೆ ತೆರಳುವ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಹಿಂದೆ ರಾಜ್ಯ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೈಗೊಂಡಿದ್ದ ಕಾರ್ಯಕ್ರಮಗಳ ವಿವರ ನೀಡುವುದು, ತಳಮಟ್ಟದ ಕಾರ್ಯಕರ್ತರ ವಿಶ್ವಾಸ ಸಂಪಾದನೆ ಸೇರಿದಂತೆ ಹಲವು ಕಾರ್ಯಗಳನ್ನು ಮುಂದಿನ ಒಂದೆರಡು ತಿಂಗಳು ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಜನರ ಬಳಿಯಲ್ಲೇ ಇರುವಂತ ಕಾರ್ಯಕ್ರಮ ರೂಪಿಸೋಣ ಎಂದು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿನ್ನೆ ತೀರ್ಮಾನಿಸಲಾಗಿದೆ.
ಜನಪರ ಸರ್ಕಾರ: "ಮುಂದಿನ ಮೇ ತಿಂಗಳಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಈ ಬಿಜೆಪಿ ಸರ್ಕಾರ ಕಿತ್ತೊಗೆಯಲು ಜನ ತೀರ್ಮಾನಿಸಿದ್ದಾರೆ. ನಿನ್ನೆ ಶಾಸಕಾಂಗ ಸಭೆಯಲ್ಲಿಯೂ ಮುಂದೆ ರಾಜ್ಯದಲ್ಲಿ ಯಾವ ರೀತಿಯ ಕಾರ್ಯಕ್ರಮ ರೂಪಿಸಬೇಕು, ಸರ್ಕಾರದ ಲೋಪವನ್ನು ಜನರ ಮುಂದಿಟ್ಟು ಉತ್ತರ ಕೇಳುತ್ತೇವೆ. ಅದು ನಮ್ಮ ಪರ ಮತವಾಗಿ ಪರಿವರ್ತನೆಯಾಗಲಿದೆ. ನಾವು ಜನಪರ, ಭ್ರಷ್ಟಾಚಾರ ರಹಿತ, ನೀಡಿದ ಭರವಸೆಗಳನ್ನು ಈಡೇರಿಸುವ ಸರ್ಕಾರ ನೀಡುತ್ತೇವೆ. ದಕ್ಷಿಣ ಭಾರತದಲ್ಲಿ ಇದು ಬಿಜೆಪಿಯ ಕಡೆಯ ಸರ್ಕಾರ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನನ್ನ ಅಧಿಕಾರ ವ್ಯಾಪ್ತಿ ಅಲ್ಲ: ಸುರ್ಜೆವಾಲಾ