ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ನ ಬಹುತೇಕ ಎಲ್ಲ ಅಲ್ಪಸಂಖ್ಯಾತ ನಾಯಕರು ಉತ್ತರ ನೀಡಿದ್ದಾರೆ ಎಂದು ಶಾಸಕ ಎನ್.ಎ.ಹ್ಯಾರಿಸ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ತಾವು ಮುಖ್ಯಮಂತ್ರಿಗಳಾಗಿದ್ದಾಗ ಅಲ್ಪಸಂಖ್ಯಾತರಿಗೆ ಯಾವ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ ಎಂಬ ಬಗ್ಗೆ ಸಾಕಷ್ಟು ವಿಷಯಗಳನ್ನು ಅವರೇ ಹೇಳಿರುವಾಗ ನೀವು ನಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ರು. ನಾವು ಕಾಂಗ್ರೆಸ್ ಪಕ್ಷದ ಆಕ್ಸಿಜನ್ ಆಗಿದ್ದೇವೆ. ಈ ಬಗ್ಗೆ ಸಂಶಯ ಬೇಡ, ನಮ್ಮ ಪಕ್ಷದ ಎಲ್ಲಾ ನಾಯಕರು ಹಂತಹಂತವಾಗಿ ಕುಮಾರಸ್ವಾಮಿ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯ ಮಾಡಿದ್ದಾರೆ. ಅವರು ಎಲ್ಲಿ ಏನನ್ನು ಮಾಡಿದ್ದಾರೆ ಎಂಬ ವಿಚಾರಕ್ಕೂ ಉತ್ತರ ನೀಡಲಾಗಿದೆ. ಈ ವಿಚಾರದಲ್ಲಿ ಇನ್ನಷ್ಟು ಚರ್ಚೆ ಅಗತ್ಯವಿಲ್ಲ ಎಂದರು.
'ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ನಲ್ಲಿ ನೆಮ್ಮದಿಯಾಗಿದ್ದಾರೆ':
ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ನಲ್ಲಿ ನೆಮ್ಮದಿಯಾಗಿದ್ದಾರೆ. ಯಾವುದೇ ರೀತಿಯ ಸಮಸ್ಯೆ ನಮಗೆ ಎದುರಾಗಿಲ್ಲ. ಯಾರಾದರೂ ಹೇಳಿಕೊಂಡರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಕೆಲವರು ತಮಗೆ ನ್ಯಾಯ ಸಿಗುತ್ತಿಲ್ಲ ಎಂದು ಹೇಳಿಕೊಂಡಿರಬಹುದು. ಆದರೆ ಪಕ್ಷ ಯಾವುದೇ ಕಾರಣಕ್ಕೂ ಯಾರನ್ನ ಹೆಚ್ಚು ಮತ್ತು ಕಡಿಮೆ ಎಂದು ಪರಿಗಣಿಸಿಲ್ಲ. ಸಮುದಾಯಕ್ಕೆ ಮಾನ್ಯತೆ ನೀಡುತ್ತಿದೆ. ವ್ಯಕ್ತಿಗತವಾಗಿ ಕೇಳಿಬರುವ ಆರೋಪ ಅದು, ಪಕ್ಷದ ಅಲ್ಪಸಂಖ್ಯಾತ ಮುಖಂಡರ ಅಭಿಪ್ರಾಯ ಅಲ್ಲ. ವೈಯಕ್ತಿಕ ಅಭಿಪ್ರಾಯವನ್ನು ತಡೆಯಲು ಸಾಧ್ಯವಿಲ್ಲ ಎಂದರು.
'ನಮ್ಮನ್ನ ಕಡೆಗಣಿಸಿಲ್ಲ':
ಕಾಂಗ್ರೆಸ್ನ ಯಾವುದೇ ನಾಯಕರು ನಮ್ಮನ್ನ ಕಡೆಗಣಿಸಿಲ್ಲ. ಪಕ್ಷದ ಅಭಿವೃದ್ಧಿ ದೃಷ್ಟಿಯಲ್ಲಿ ಕೆಲವರಿಗೆ ಮಾತ್ರ ಅಧಿಕಾರ ನೀಡಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಅವಕಾಶ ನೀಡಲಾಗಿದೆ. ಪಕ್ಷದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ನಿಜ. ಆದರೆ ಸಿಗುವುದೇ ಇಲ್ಲ ಎಂದು ಹೇಳಲಾಗದು. ಮುಂದೆ ಸಿಗಬಹುದು. ಈ ವಿಚಾರವಾಗಿ ನನಗಾಗಲಿ, ಅಬ್ದುಲ್ ಜಬ್ಬಾರ್ ಅವರಿಗಾಗಲಿ ಯಾವುದೇ ಬೇಸರ ಇಲ್ಲ. ನಮಗೆ ಬೇರೆಯದೇ ರೀತಿಯ ಸಾಕಷ್ಟು ಜವಾಬ್ದಾರಿಗಳು ಸಿಕ್ಕಿವೆ. ಅಲ್ಪಸಂಖ್ಯಾತರ ಎಲ್ಲ ಸಮುದಾಯ ಕಾಂಗ್ರೆಸ್ ಪಕ್ಷದಲ್ಲಿ ನೆಮ್ಮದಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಅಲ್ಪಸಂಖ್ಯಾತ ಓಟ್ ಬ್ಯಾಂಕ್ಗೆ ಲಗ್ಗೆಯಿಡಲು ಕಾರ್ಯತಂತ್ರ ಹೆಣೆದಿದೆಯೇ ಜೆಡಿಎಸ್?
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ, ಪಕ್ಷದ ಅಲ್ಪಸಂಖ್ಯಾತ ನಾಯಕರಲ್ಲಿ ಯಾರೇ ಅಸಮಾಧಾನ ವ್ಯಕ್ತಪಡಿಸಲಿ, ಅವರೊಂದಿಗೆ ಸಮಾಲೋಚಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಜೊತೆ ಮಾತುಕತೆ ನಡೆಸಿದ್ದೇನೆ. ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಎಲ್ಲಾ ನಾಯಕರನ್ನು ಭೇಟಿಯಾಗಿ ಸಮಾಲೋಚಿಸಿದ್ದೇನೆ ಎಂದರು.
ಬಿಟ್ ಕಾಯಿನ್ ಅಕ್ರಮ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸರ್ಕಾರದ ಕೈಯಲ್ಲಿ ಅಧಿಕಾರ ಇದೆ. ಇದನ್ನು ವಿಚಾರಣೆ ಮಾಡುವವರೇ ಆರೋಪಿಗಳು ಯಾರು, ಇದರಲ್ಲಿ ಏನಿದೆ ಎನ್ನುವುದನ್ನು ಹೇಳಬೇಕು. ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಬೇಕು ಆ ರೀತಿ ಕೈಗೊಳ್ಳುತ್ತದೆ. ಇದರಲ್ಲಿ ಹೇಳುವುದು ಕೇಳುವುದು ಏನಿದೆ? ಈ ಅಕ್ರಮವನ್ನು ಯಾರಾದರೂ ಮಾಡಿರಲಿ, ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳುತ್ತದೆ ಅಷ್ಟೇ ಎಂದು ಹೇಳಿದರು.