ಬೆಂಗಳೂರು: ಸರ್ಕಾರದ ವಿರುದ್ಧ ಕೊರೊನಾ ನಿಯಂತ್ರಣ ತಡೆ ವೈಫಲ್ಯ ಆರೋಪ ಮಾಡುವ ಜತೆಗೆ ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ ನಿರ್ಧಾರ ಮಾಡಿದ್ದು, ಈ ಸಂಬಂಧ ಚರ್ಚೆಗೆ ಇಂದು ಪಕ್ಷದ ನಾಯಕರ ವೀಡಿಯೊ ಕಾನ್ಫರೆನ್ಸ್ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಈ ನಿಟ್ಟಿನಲ್ಲಿ ಪಕ್ಷದ ಹಿರಿಯ ನಾಯಕರು ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಸಭೆ ನಡೆಸಲಿದ್ದಾರೆ. ಇದಾದ ಬಳಿಕ ವಿವಿಧ ಜಿಲ್ಲೆಯಲ್ಲಿರುವ ನಾಯಕರ ಜತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಲಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆದಿದ್ದಾರೆ.
ಮಾಜಿ ಸಿಎಂ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈಗಾಗಲೇ ಪಕ್ಷದ ಟಾಸ್ಕ್ ಫೋರ್ಸ್ ಸಮಿತಿ ನಾಯಕರಿಗೆ ತಮ್ಮ ರಾಜ್ಯ ಮಟ್ಟದ ವರದಿ ನೀಡಿದೆ. ರಾಜ್ಯದೆಲ್ಲೆಡೆ ಸುತ್ತಾಡಿ ಸಂಗ್ರಹಿಸಿರುವ ಮಾಹಿತಿಯನ್ನು ಪಕ್ಷಕ್ಕೆ ನೀಡಿದೆ. ಅದರಲ್ಲಿ ಹಲವು ವೈಫಲ್ಯಗಳನ್ನ ಸಮಿತಿ ಗುರ್ತಿಸಿದೆ. ಈ ವೈಪಲ್ಯಗಳನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ನಾಯಕರು ಸಿದ್ಧತೆ ಆರಂಭಿಸಿದ್ದಾರೆ.
ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ವಿರುದ್ಧ ಹೋರಾಟ ನಡೆಸಲು ತಯಾರಿ ನಡೆಸಲಿದ್ದಾರೆ. ಇದನ್ನು ಇಂದಿನ ಸಭೆಯಲ್ಲಿ ನಾಯಕರು ಚರ್ಚಿಸಲಿದ್ದಾರೆ. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಮಾಜಿ ಸಚಿವರು, ಶಾಸಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷರನ್ನೂ ಸಭೆಗೆ ಆಹ್ವಾನಿಸಲಾಗಿದೆ.
ಇಂದಿನ ಸಭೆಯ ಬಳಿಕ ವೀಡಿಯೊ ಕಾನ್ಫರೆನ್ಸ್ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡು ಜಿಲ್ಲಾ ಮಟ್ಟದ ನಾಯಕರ ಜತೆ ಚರ್ಚಿಸಿ, ಸರ್ಕಾರದ ವಿರುದ್ಧದ ಹೋರಾಟದ ಸಂಬಂಧ ಅಂತಿಮ ರೂಪುರೇಷೆ ಹೆಣೆಯಲಾಗುತ್ತದೆ.