ಬೆಂಗಳೂರು: ಸಾವಿರಾರು ಜನ ಇದ್ದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕರನ್ನು ಕ್ವಾರೆಂಟೈನ್ ಮಾಡಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಾವಿರಾರು ಜನರು ಸೇರಿದ್ದರು. ಅಲ್ಲಿ ಯಾರಿಗಾದರೂ ಕೊರೊನಾ ಪಾಸಿಟಿವ್ ಇರಬಹುದು. ಅಲ್ಲಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೋಗಿದ್ದಾರೆ. ಯಾರಿಗಾದರೂ ಸೋಂಕು ಇರಬಹುದು ಅನ್ನೋ ಪರಿಜ್ಞಾನವೂ ಅವರಿಗೆ ಇಲ್ಲವಲ್ಲ ಎಂದು ಕಿಡಿ ಕಾರಿದ್ದಾರೆ.
ಡಿಕೆಶಿ ಅವರು ಸೋಂಕಿತ ಪತ್ರಕರ್ತರ ಜತೆ ಸಂಪರ್ಕಕ್ಕೆ ಬಂದಿದ್ದ ಬಿಜೆಪಿ ಸಚಿವರು ಕ್ವಾರೆಂಟೈನ್ ಆಗಿಲ್ಲ ಎಂದು ಟ್ವೀಟ್ ಮೂಲಕ ಟೀಕಿಸಿದ್ದರು. ಈಗ ಅವರೇ ಸಾವಿರಾರು ಜನರಿದ್ದ ಬಸ್ ನಿಲ್ದಾಣಕ್ಕೆ ಹೋಗಿ ಬಂದಿದ್ದಾರೆ. ಈಗ ಅವರೇ ಕ್ವಾರೆಂಟೈನ್ ಆಗಬೇಕಾಗಿದೆ. ಹೀಗಿದ್ದಾಗ ಅವರು ಬೇರೆಯವರಿಗೆ ಹೇಳೋ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರಿಗೂ ತಪಾಸಣೆಯಾಗಬೇಕು. ಜೊತೆಗೆ ಅವರಿಗೂ ಕ್ವಾರೆಂಟೈನ್ ಮಾಡೋ ಸಾಧ್ಯತೆ ಬರಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆ ಹಾಗೂ ಸಿಎಂ ಜೊತೆ ಚರ್ಚಿಸಿ ನಿಯಮ ಉಲ್ಲಂಘಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಕೊಟ್ಟಿದ್ದು ನಕಲಿ ಚೆಕ್:
ಕಾಂಗ್ರೆಸ್ ಅಧ್ಯಕ್ಷರು ನೀಡಿದ ಚೆಕ್ ಮೇಲೆ ದಿನೇಶ್ ಗುಂಡೂರಾವ್ ಸಹಿ ಇದೆ. ಆದರೆ, ಅಧ್ಯಕ್ಷ ಡಿ.ಕೆ. ಶಿವಕುಮಾರ್. ಇವರ ಒಳ ಜಗಳ ಏನಿದೆಯೊ ಗೊತ್ತಿಲ್ಲ. ಆದರೆ, ಚೆಕ್ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಹಿ ಇಲ್ಲ. ಹೀಗಾಗಿ ಈ ಚೆಕ್ ಕೂಡ ನಕಲಿ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ತಿಂಗಳು ಕಳೆಯಿತು. ಅವರಿಗೆ ಅಕೌಂಟ್ ಚೇಂಜ್ ಮಾಡುವ ಜ್ಞಾನ ಇಲ್ಲವಾ?. ಹೀಗಾಗಿ ಅವರು ನೀಡಿದ ಚೆಕ್ನ ವ್ಯಾಲಿಡಿಟಿ ತಪಾಸಣೆ ಮಾಡಬೇಕಾಗಿದೆ. ಅವರ ಒಂದು ಕೋಟಿ ಚೆಕ್ ಅನ್ನು ನಾವು ತಗೊಂಡಿಲ್ಲ. ಚೆಕ್ಗೆ ಸಹಿ ಹಾಕಿದವರೇ ರಿಯಲ್ ಅಧ್ಯಕ್ಷರು. ಡಿಕೆಶಿ ನಕಲಿ ಅಧ್ಯಕ್ಷರಾ ಅಥವಾ ದಿನೇಶ್ ಗುಂಡೂರಾವ್ ರಿಯಲ್ ಅಧ್ಯಕ್ಷರಾ?. ಡಿಕೆಶಿ ನಕಲಿ ಅಧ್ಯಕ್ಷ. ಖಾತೆ ಬದಲಾಯಿಸುವ ಜ್ಞಾನ ಇಲ್ಲದವರು ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡ್ತಾರೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ನವರು ಉತ್ತರಕುಮಾರನ ಪೌರುಷ ತೋರ್ತಾ ಇದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಕೊರೊನಾ ಕಂಟ್ರೋಲ್ಗೆ ಕೇಂದ್ರ ಸರ್ಕಾರ ಬೇಡ, ವಲ್ಡ್ ಬ್ಯಾಂಕು ಬೇಡ ಎನ್ನುವ ರೀತಿ ಕಾಂಗ್ರೆಸ್ ಬಿಂಬಿಸಿಕೊಳ್ತಿದೆ. ನಮ್ಮ ಬಳಿ ಕೋಟ್ಯಂತರ ರೂಪಾಯಿ ಇದೆ ಎಂದು ಹೋದಲ್ಲಿ ಬಂದಲ್ಲಿ ಬಸ್ ಸ್ಟಾಂಡ್ ಹೋಗಿ ಹೇಳಿಕೊಳ್ತಾ ಇದ್ದಾರೆ. ಅವರು ಅದಕ್ಕಿಂತ ಹೆಚ್ಚು ಕೊಡಬೇಕು. ನೊಂದ ಜನರಿಗೆ ಕಾಂಗ್ರೆಸ್ ಆ ಮೂಲಕ ಅವಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಕೊರೊನಾಗೆ ಹಿಂದೆ ದಿನೇಶ್ ಗುಂಡೂರಾವ್ ಅಧ್ಯಕ್ಷ ಆಗಿದ್ದಾಗ ದೇಣಿಗೆ ನೀಡಿರಲಿಲ್ಲ. ಈಗ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಆಗ್ತಾ ಇದ್ದಂತೆ ಏಕಾಏಕಿ ದುಡ್ಡು ಬಂದಿದೆ. ಅದು ನಮಗೆ ಆಶ್ಚರ್ಯ ಆಗಿದೆ. ನಾವು ನೂರಾರೂ ಕೋಟಿ ಈಗಾಗಲೇ ಖರ್ಚು ಮಾಡಿದ್ದೇವೆ. ಈಗ ನೀವು ಒಂದು ಕೋಟಿ ರೂ. ನೀಡಿ ನಂದು ಎಲ್ಲಿ ಇಡ್ಲಿ ಪೂಜಾರಪ್ಪ ಎಂದಂತಾಗಿದೆ ಎಂದು ಕಿಡಿ ಕಾರಿದರು.