ಬೆಂಗಳೂರು: ಜೆಡಿಎಸ್ಗೆ ನೀಡಲಾಗಿರುವ ತುಮಕೂರು ಕ್ಷೇತ್ರವನ್ನು ವಾಪಸ್ ಪಡೆಯಲು ಡಿಸಿಎಂ ಪರಮೇಶ್ವರ್, ಹಾಲಿ ಸಂಸದ ಮುದ್ದಹನುಮೇಗೌಡರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಗೆದ್ದಿರುವ ಹಾಲಿ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲ್ಲ ಎಂಬ ನಿರ್ಣಯವಾಗಿದ್ದರೂ ಕೊನೆ ಕ್ಷಣದಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಕೊಟ್ಟಿರುವುದು ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಅಚ್ಚರಿ ತಂದಿದೆ.
ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿರುವ ಹಿನ್ನೆಲೆ ಕ್ಷೇತ್ರದ ಕೈ ನಾಯಕರು, ಸಂಸದ ಮುದ್ದಹನುಮೇಗೌಡರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಗೆಲ್ಲುವ ಕ್ಷೇತ್ರ ತುಮಕೂರನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ಬಗ್ಗೆ ಸ್ಥಳೀಯ ಕಾರ್ಯಕರ್ತರು, ಮುಖಂಡರಲ್ಲೂ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇತ್ತ ಡಿಸಿಎಂ ಡಾ. ಜಿ.ಪರಮೇಶ್ವರ್ ಕೂಡ ಹೈಕಮಾಂಡ್ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ.
ಕಾಣದ ಕೈವಾಡ ಶಂಕೆ:
ಇತ್ತ ತುಮಕೂರು ಕ್ಷೇತ್ರ ಕೈತಪ್ಪಿ ಹೋಗಿರುವುದರ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರ ಕೈವಾಡ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೈಕಮಾಂಡ್ ಈ ನಿರ್ಧಾರದ ಹಿಂದೆ ಸಿದ್ದರಾಮಯ್ಯರ ಕೈವಾಡ ಇದೆ ಎಂಬ ಕೂಗು ಪಕ್ಷದೊಳಗಿನಿಂದ ಕೇಳಿ ಬರುತ್ತಿದೆ. ಜೆಡಿಎಸ್ ಮೈಸೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿತ್ತು. ಆದರೆ, ತಮ್ಮ ಹಿಡಿತದಲ್ಲಿರುವ ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ನಿರಾಕರಿಸಿದ್ದರು.
ಅದರ ಬದಲಿಗೆ ತಮಕೂರು ಕ್ಷೇತ್ರ ಬಿಟ್ಟುಕೊಡಲು ಸಿದ್ದರಾಮಯ್ಯ ಹೈಕಮಾಂಡ್ಗೆ ತಾಕೀತು ಮಾಡಿದ್ದರಾ ಎಂಬ ಅನುಮಾನ ಮೂಡಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ತುಮಕೂರು ಕ್ಷೇತ್ರವನ್ನು ಕೈ ಹೈಕಮಾಂಡ್ ಜೆಡಿಎಸ್ಗೆ ಬಿಟ್ಟುಕೊಡಲು ನಿರ್ಧರಿಸಿತು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹೈಕಮಾಂಡ್ ಈ ನಿರ್ಧಾರ ಡಿಸಿಎಂ ಪರಮೇಶ್ವರ್ ಸೇರಿದಂತೆ ಹಲವರಿಗೆ ಅಚ್ಚರಿ ತಂದಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂಬುದನ್ನು ಅವರು ಸೂಚ್ಯವಾಗಿ ಬೊಟ್ಟು ಮಾಡಿದ್ದಾರೆ.