ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಇಂದು ಸಾಕಷ್ಟು ನಾಯಕರು ಪ್ರಚಾರ ಕಾರ್ಯ ನಡೆಸಿದರು.
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವರಾದ ಜಮೀರ್ ಅಹ್ಮದ್, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ಶಾಸಕ ಅಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ಕ್ಷೇತ್ರದ ವಿವಿಧಡೆ ಪ್ರಚಾರ ನಡೆಸಿದರು.
ಜಾಲಹಳ್ಳಿಯಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ, ಶಾಸಕ ಅಜಯ್ ಸಿಂಗ್ ಜತೆಗೆ ಗುರುವಾರ ಪಾದಯಾತ್ರೆ ಮೂಲಕ ಮತಯಾಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ಕೂಡ ಇದ್ದರು.
ಇನ್ನು ಮಾಜಿ ಸಚಿವ ಜಮೀರ್ ಅಹ್ಮದ್ ಆರ್.ಆರ್ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಚುನಾವಣೆ ದಿನಾಂಕ ಮತದಾನ ಪ್ರಕ್ರಿಯೆ ಹಾಗೂ ಕಾಂಗ್ರೆಸ್ಗೆ ಬೆಂಬಲ ಸೂಚಿಸುವ ಕುರಿತು ಮುಸ್ಲಿಂ ಮುಖಂಡರೊಂದಿಗೆ ಸಮಾಲೋಚಿಸಿದರು.
ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸಂಚರಿಸಿ ಪ್ರಚಾರ ಕಾರ್ಯ ನಡೆಸಿದ ಅವರು ಬಿಸಿಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಕ್ಷದ ಕಾರ್ಯಕರ್ತರಿಗೆ, ಬಾದಾಮಿ ಹಾಲು ವಿತರಿಸಿದರು. ಅಲ್ಲದೇ ಆರ್.ಆರ್ ನಗರ ಕ್ಷೇತ್ರದ ವಿವಿಧ ಕಡೆಗಳಲ್ಲಿ ಮನೆ ಮನೆಗೆ ತೆರಳಿ ನಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಮತ ಯಾಚಿಸಿದರು. ಸಂಜೆ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಲಗ್ಗೆರೆ ಭಾಗದಲ್ಲಿ ಸಂಚರಿಸಿ ರೋಡ್ ಶೋ ನಡೆಸಿದರು. ಮಾಜಿ ಸಚಿವ ರಾಮಲಿಂಗಾರೆಡ್ಡಿ ಇವರಿಗೆ ಸಾಥ್ ನೀಡಿದರು.
ಉಪಚುನಾವಣೆ ಮತದಾನ ದಿನಾಂಕ ಸಮೀಪಿಸುತ್ತಿದ್ದು ರಾಜ್ಯ ಕಾಂಗ್ರೆಸ್ನ ಹಲವು ನಾಯಕರು ಕ್ಷೇತ್ರದ ವಿವಿಧ ಭಾಗಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು ಕಂಡುಬರುತ್ತಿದೆ.