ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯಿಂದ ಬಾಗಲಕೋಟೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಸಂಬಂಧ ಕಾಂಗ್ರೆಸ್ ಸಭೆ ನಡೆಸಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ನೆರೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಪಾದಯಾತ್ರೆ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದ್ದು, ಈ ಪಾದಯಾತ್ರೆ ರೂಪುರೇಷೆ ಕುರಿತಂತೆ ಮಾತುಕತೆ ನಡೆಸಲಾಗಿದೆ.
ನೆರೆ ಪೀಡಿತ ಭಾಗದಲ್ಲಿ ಪಾದಯಾತ್ರೆ ನಡೆಸೋ ಮೂಲಕ ಪಕ್ಷ ಸಂಘಟನೆ ಮಾಡುವುದು, ನೆರೆ ಸಂತ್ರಸ್ತ ಜನರೊಂದಿಗೆ ಸರ್ಕಾರ ಇಲ್ಲದಿದ್ದರೂ ಕಾಂಗ್ರೆಸ್ ಇದೇ ಅನ್ನೋ ಸಂದೇಶ ರವಾನಿಸೋದು ಯಾತ್ರೆ ಉದ್ದೇಶವಾಗಿದೆ. ಅದಕ್ಕಾಗಿ ನೆರೆ ಪೀಡಿತವಾದ ಯಾವ ಭಾಗದಿಂದ ಯಾವ ಭಾಗಕ್ಕೆ ಯಾತ್ರೆ ಮಾಡಿದರೆ ಹೆಚ್ಚು ಲಾಭ ಅನ್ನೋ ಬಗ್ಗೆ ಚರ್ಚೆ ನಡೆಸಲಾಗಿದೆ.
ಬೆಳಗಾವಿಯಿಂದ ಬಾಗಲಕೋಟೆ ಮಾರ್ಗವಾಗಿ ಕೂಡಲಸಂಗಮದ ವರೆಗೆ, ಕೂಡಲ ಸಂಗಮದಿಂದ ಬೆಳಗಾವಿ ವರೆಗೆ, ಅಥವಾ ಹುಬ್ಬಳ್ಳಿ, ಧಾರವಾಡದಿಂದ ಬೆಳಗಾವಿವರೆಗೆ ಮಾಡಬಹುದಾ? ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ಯಾತ್ರೆ ಅಂತ್ಯಗೊಳ್ಳುವ ಸಂದರ್ಭದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಮಾಡುವುದು. ಸಮಾವೇಶದ ಮೂಲಕ ಬಿಜೆಪಿ ಸರ್ಕಾರದ ವೈಫಲ್ಯಗಳನ್ನ ಎತ್ತಿ ತೋರಿಸುವುದು. ಜೊತೆಗೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಲಾಭ ಮಾಡಿಕೊಡುವ ಬಗ್ಗೆ ಗಹನವಾದ ಚರ್ಚೆ ನಡೆಯಿತು.
ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಚೆಲುವರಾಯಸ್ವಾಮಿ, ಹೆಚ್ ಕೆ ಪಾಟೀಲ್ ಎಚ್ ವೈ ಮೇಟಿ, ಮಾಜಿ ಶಾಸಕ ನಂಜಯ್ಯನಮಠ ಸೇರಿ ಇತರ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.