ಬೆಂಗಳೂರು: ಗ್ಯಾರಂಟಿ ಕೊಡುಗೆಗಳನ್ನು ನೀಡುವ ಭರವಸೆಯ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ವು ಈಗ ಕಂಡೀಷನ್ಸ್ ಅಪ್ಲೈ ಅಂತಾ ಸ್ಟಾರ್ ಮಾರ್ಕ್ ಹಾಕದೇ, ಎಲ್ಲರಿಗೂ ಉಚಿತವಾಗಿ ಕೊಡಬೇಕು ಎಂದು ಮಾಜಿ ಸಚಿವ ಡಾ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ಗ್ಯಾರಂಟಿ ಕೊಟ್ಟೇ ಕೊಡುತ್ತೇವೆ ಅಂತ ಹೇಳಿದ್ದರು. ಈಗ ಪರಮೇಶ್ವರ್ ಅವರು ಕಂಡೀಷನ್ಸ್ ಅಪ್ಲೈ ಅಂತ ಸ್ಟಾರ್ ಮಾರ್ಕ್ ಹಾಕಿದ್ದಾರೆ. ಇವತ್ತು ಅವರು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಎಲ್ಲರಿಗೂ ಕೊಡುತ್ತೇವೆ ಎಂದಿದ್ದರು.
ಆಗ ನನಗೂ ಸಿಗುತ್ತೆ, ನಿನಗೂ ಸಿಗುತ್ತೆ. ನನಗೂ ಭಾಗ್ಯ, ನಿನಗೂ ಭಾಗ್ಯ ಅಂತ ಸಿದ್ದರಾಮಯ್ಯ, ಶಿವಕುಮಾರ್ ಹೇಳಿದ್ರು. ಸ್ಪಷ್ಟತೆಯಿಂದ ಎಲ್ಲರಿಗೂ ಮಾತು ಕೊಟ್ಟಿದಾರೆ. ಎಲ್ಲರಿಗೂ 200 ಯೂನಿಟ್ ಕರೆಂಟ್ ಫ್ರೀ, ಪ್ರತಿ ಕುಟುಂಬದ ಯಜಮಾನಿಗೆ 2000 ರೂ. ನಿರುದ್ಯೋಗ ಭತ್ಯೆ ಅಂತ ಹೇಳಿದಂತೆ ಕೊಡಬೇಕು, ಷರತ್ತುಗಳನ್ನೆಲ್ಲಾ ವಿಧಿಸಬೇಡಿ, ಗ್ಯಾರಂಟಿ ಕೊಡುವಾಗ ಕಂಡೀಷನ್ ಹೇಳಿರಲಿಲ್ಲ. ಈಗಲೇ ಕಂಡೀಷನ್ ಹೇಳಬೇಡಿ ಎಲ್ಲರಿಗೂ ಗ್ಯಾರಂಟಿ ಕೊಡಿ ಎಂದು ಹೇಳಿದರು.
ಹಳ್ಳಿಗಳಲ್ಲಿ ಕರೆಂಟ್ ಬಿಲ್ ಕಟ್ಟದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇವರು ಹೇಳಿರೋದನ್ನು ಜನ ಪಾಲಿಸ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರೆಂಟ್ ಬಿಲ್ ಕಟ್ಟಂಗಿಲ್ಲ ಅಂತ ಹೇಳಿದ್ದಾರೆ. ಅದಕ್ಕೆ ಕಟ್ಟುತ್ತಿಲ್ಲ. ನಿರುದ್ಯೋಗಿಗಳಿಗೆ 2 ಸಾವಿರ ಹಣ ಕೊಡುತ್ತೇವೆ ಎಂದಿದ್ದಾರೆ ಕೊಡಬೇಕು ಅಷ್ಟೇ. ಇನ್ನು ಏನೇನು ಹೇಳಿದ್ದಾರೋ ಅದನ್ನೆಲ್ಲಾ ಮಾಡಬೇಕು. ಹಾಗಾಗಿ ಜನ ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಎನ್ನುವ ನಿಯಮ ಜಾರಿಯನ್ನು ಎದುರು ನೋಡುತ್ತಿದ್ದಾರೆ. ನಾವು ಇದನ್ನ ಅಸ್ತ್ರ ಮಾಡಿಕೊಂಡಿಲ್ಲ. ಅವರು ಹೇಳಿದ್ದಾರೆ, ಅವರು ಕಟ್ಟಲ್ಲ ಅಂತಿದ್ದಾರೆ ಅಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ನೇಮಕ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.
ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸದ ಸ್ಥಿತಿ ಏರುಪೇರು.. ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಕರುನಾಡಲ್ಲಿ ಅಭೂತಪೂರ್ವ ಜಯಭೇರಿ ಭಾರಿಸಿದೆ. 135 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ರಾಜ್ಯದ ಗದ್ದುಗೆ ಹಿಡಿದಿದೆ. ಆದರೆ ಇದೀಗ ರಾಜ್ಯದ ಜನರ ಚಿತ್ತ ಕಾಂಗ್ರೆಸ್ ಘೋಷಿಸಿರುವ ಉಚಿತಗಳ ಭರವಸೆಯ ಮೇಲಿದೆ. ಉಚಿತ ಭರವಸೆಗಳ ಅನುಷ್ಠಾನಕ್ಕೆ ಕೆಲ ಸವಾಲುಗಳೂ ಕಾಂಗ್ರೆಸ್ಗೆ ಎದುರಾಗಲಿವೆ.
ಗ್ಯಾರಂಟಿಗೆ ಮುಂದಿನ ಸವಾಲುಗಳೇನು? : ಐದೂ ಭರವಸೆಗಳು ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಜಾರಿಗೆ ಬರಲಿದ್ದು, ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಎಲ್ಲ ಭರವಸೆಗಳಿಗೆ ಅಂಕಿತ ಹಾಕಲಾಗುವುದು ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 40,000 ಕೋಟಿ ರೂ. ಬೇಕಾಗಲಿದ್ದು, ಇದು ರಾಜ್ಯ ಬಜೆಟ್ ಮೊತ್ತದ ಕೇವಲ 15% ಆಗಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಆದರೆ, ಅಸಲಿಗೆ ಕಾಂಗ್ರೆಸ್ ಘೋಷಿಸಿದಂತೆ ರಾಜ್ಯದ ಎಲ್ಲರಿಗೂ ಈ ಯೋಜನೆಗಳನ್ನು ಅನ್ವಯಿಸಿದರೆ ಅಂದಾಜು ಮೊತ್ತ 60,000 ಕೋಟಿ ರೂ. ದಾಟುವ ಸಾಧ್ಯತೆ ಇದೆ.
ಬೊಮ್ಮಾಯಿ ಸರ್ಕಾರ 2023-24ರ ಬಜೆಟ್ ನಲ್ಲಿ ಅಲ್ಪ ಉಳಿತಾಯದ ಬಜೆಟ್ ಮಂಡಿಸಿದ್ದರು. 2022-23ರ ಸರ್ಕಾರದ ಮಧ್ಯಮಾವಧಿ ವಿತ್ತೀಯ ವರದಿಯಲ್ಲಿ ರಾಜ್ಯದ ಹಣಕಾಸಿನಲ್ಲಿ ಆದಾಯ ಕೊರತೆಯ ಪರಿಸ್ಥಿತಿ ಇರುವುದರಿಂದ ಸಹಾಯಧನಗಳ ವೆಚ್ಚ ಕಡಿತ ಮಾಡಬೇಕು. ಕೇವಲ ಬಡವರಿಗೆ ಮಾತ್ರ ಸಹಾಯಧನ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಈ ಮಧ್ಯೆ ಕಾಂಗ್ರೆಸ್ ನ ಬೃಹತ್ ಮೊತ್ತದ ಗ್ಯಾರಂಟಿಗಳನ್ನು ಜಾರಿ ಮಾಡುವುದು ರಾಜ್ಯದ ಬೊಕ್ಕಸದ ಸ್ಥಿತಿಯನ್ನು ಏರುಪೇರು ಮಾಡಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
ಇದನ್ನೂಓದಿ:ಸಿಎಂ ಸ್ಥಾನಕ್ಕೆ ಪರಮೇಶ್ವರ ಅವರನ್ನೂ ಪರಿಗಣಿಸಿ: ತುಮಕೂರಿನಲ್ಲಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ