ಬೆಂಗಳೂರು: ಚಾಮರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ರಾಜು, ಮಾಜಿ ಉಪ ಮೇಯರ್ ಶ್ರೀರಾಮೇಗೌಡ, ಪಾಲಿಕೆಯ ಮಾಜಿ ಸದಸ್ಯರಾದ ಗೌರಮ್ಮ, ಕಾಂಗ್ರೆಸ್ ಪಕ್ಷದ ನಾಯಕರಾದ ಶೇಖರ್, ದೊರೆ ಸೇರಿ 53ಕ್ಕು ಹೆಚ್ಚು ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೆರ್ಪಡೆಯಾದರು, ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಮಾಜಿ ಪ್ರಧಾನಿ ದೇವೇಗೌಡರ ಕಿವಿಮಾತು: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ಮಾಡುತ್ತಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಎಲ್ಲ ಕಡೆ ಪಕ್ಷಕ್ಕೆ ಹೆಚ್ಚು ಶಕ್ತಿ ಬರುತ್ತಿದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತುಂಬಾ ಬೆಳವಣಿಗೆಗಳು ನಡೆಯುತ್ತಿವೆ. ನಾವು ನಮ್ಮ ಪಾಡಿಗೆ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ನಾನು ಟಿಕೆಟ್ ಆಕಾಂಕ್ಷಿ ಅಲ್ಲ: ಜೆಡಿಎಸ್ಗೆ ಸೇರ್ಪಡೆಯಾದ ನಂತರ ಮಾತನಾಡಿದ ಗೋವಿಂದರಾಜು, ನಾನು ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಕಳೆದ 20 ವರ್ಷಗಳಿಂದ ಚಾಮರಾಜಪೇಟೆಯಲ್ಲಿ ಅಭಿವೃದ್ಧಿ ಆಗಿಲ್ಲ. ಅದಕ್ಕಾಗಿ ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದೇವೆ. 2013, 2018 ರಲ್ಲಿ ಜಮೀರ್ ಅಹಮದ್ ಜೊತೆ ನಿಂತಿದ್ದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಹಾಗಾಗಿ ಇಂದು ಜೆಡಿಎಸ್ ಸೇರ್ಪಡೆ ಆಗಿದ್ದೇನೆ. ನಾನು ಟಿಕೆಟ್ ಆಕಾಂಕ್ಷಿ ಖಂಡಿತಾ ಅಲ್ಲ. ಪಕ್ಷ ಅವಕಾಶ ಕೊಟ್ಟರೆ ಖಂಡಿತಾ ಸ್ಫರ್ಧೆ ಮಾಡುತ್ತೇನೆ ಎಂದರು.
ಚಾಮರಾಜಪೇಟೆಯಲ್ಲಿ ಆರ್ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಜಾದ್ ನಗರ ವಾರ್ಡ್‌ನ ಮಾಜಿ ಕಾರ್ಪೋರೆಟರ್ ಗೌರಮ್ಮ ಮತ್ತು ಪತಿ ಗೋವಿಂದರಾಜು ಅವರು ಆ ಪ್ರಕರಣದಲ್ಲಿ ಖುಲಾಸೆಯಾಗಿ ಇದೀಗ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಸುಪಾರಿ ನೀಡಿ ಲಿಂಗರಾಜು ಹತ್ಯೆ ಮಾಡಲಾಗಿತ್ತು ಎಂಬ ಆರೋಪದಡಿ ದಂಪತಿ ಜೈಲು ಸೇರಿದ್ದರು. ಹಲವು ವರ್ಷ ಜೈಲಿನಲ್ಲಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಕೇಸ್ ಖುಲಾಸೆಯಾಗಿದ್ದು, ಇಗ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ಚುನಾವಣೆಗೆ ಐದಾರು ತಿಂಗಳು ಮುನ್ನವೇ ಸಂಭಾವ್ಯ 'ಕೈ' ಅಭ್ಯರ್ಥಿಗಳ ಪಟ್ಟಿ ರೆಡಿ: ವಿವರ ಇಲ್ಲಿದೆ..