ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ 2ನೇ ದಿನವೂ ಪ್ರತಿಭಟನೆ ನಡೆಯಿತು. ಚಂದಾಪುರ ಹೆದ್ದಾರಿ ವೃತ್ತ ಮತ್ತು ವಿಜಯಪುರ ಸರ್ಕಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರೊಟೆಸ್ಟ್ ನಡೆಸಿದರು.
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಕೆಲ ಕಾಲ ಹೆದ್ದಾರಿ ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರಾರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಹೆದ್ದಾರಿಯಲ್ಲೇ ಕುಳಿತು ಬಿಜೆಪಿ ವಿರುದ್ದ ದಿಕ್ಕಾರ ಕೂಗಿ, ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣವನ್ನು ಖಂಡಿಸಿ ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ವಿಜಯಪುರದ ಸರ್ಕಲ್ನಲ್ಲಿ ಡಿಕೆ ಶಿವಕುಮಾರ್ ಅಭಿಮಾನಿ ಸಂಘದವರು ಪ್ರತಿಭಟನೆ ನಡೆಸಿದರು.ಇನ್ನು ಮಳೆಯ ನಡುವೆಯೂ ನೂರಾರು ಅಭಿಮಾನಿಗಳು ಸರ್ಕಲ್ ಬಳಿ ಮೋದಿ ಮತ್ತು ಅಮಿತ್ ಶಾ ಅವರ ಪೋಟೋ ಇರುವ ಬ್ಯಾನರ್ನಲ್ಲಿ ಐಟಿ ನಾನೆ, ಇಡಿ ನಾನೆ ಎಂದು ಬರೆದು ದಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದಾಪುರ ಶಿವರಾಮರೆಡ್ಡಿ, ಗೋಪಾಲರೆಡ್ಡಿ, ಬಳ್ಳೂರು ಮುನಿವೀರಪ್ಪ, ಆರ್ಕೆ ಕೇಶವರೆಡ್ಡಿ ಕಿತ್ತಗಾನಹಳ್ಳಿ ಭದ್ರಾರೆಡ್ಡಿ, ಗುಡ್ಡಹಟ್ಟಿ, ಇಗ್ಗಲೂರು ಮುನಿರಾಜು, ರಘು, ದೊಡ್ಡಹಾಗಡೆ ಹರೀಶ್, ಆನಂದರೆಡ್ಡಿ, ನಿರ್ಮಲಾ ಭಾಗವಹಿಸಿದ್ದರು.