ಬೆಂಗಳೂರು: ಕೊರೊನಾ ಸೋಂಕು ವರದಿ ವಿಚಾರದಲ್ಲಿ ಬೇಗೂರು ಪೊಲೀಸರೊಬ್ಬರ ರಿಪೋರ್ಟ್ ಎಡವಟ್ಟು ಪ್ರಕರಣದ ಬಳಿಕವೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಇಂತಹುದೇ ಮತ್ತೊಂದು ಘಟನೆ ಇದೀಗ ಬೆಳಕಿಗೆ ಬಂದಿದೆ.
ಶ್ರೀರಾಮಪುರ ಪೊಲೀಸ್ ಠಾಣೆ ಸಿಬ್ಬಂದಿಗೆ ಜೂನ್ 29 ರಂದು ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಪರೀಕ್ಷೆಯಲ್ಲಿ ಕೋವಿಡ್ ರಿಪೋರ್ಟ್ ಪಾಸಿಟಿವ್ ಕಂಡು ಬಂದಿದ್ದರಿಂದ ಚಿಕಿತ್ಸೆಗಾಗಿ ಜಿಕೆವಿಕೆಯ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಮೊಬೈಲ್ ಗೆ ಇಂದು ಬೆಳಗ್ಗೆ ನೆಗೆಟಿವ್ ಎಂದು ಮೆಸೇಜ್ ಬಂದಿದೆ.
ಈ ಬಗ್ಗೆ ಆರೋಗ್ಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಎಲ್ಲರಿಗೂ ನೆಗೆಟಿವ್ ಮೆಸೇಜ್ ಬರ್ತಿದೆ. ನಿಮಗೆ ಕೋವಿಡ್ ಪಾಸಿಟಿವ್ ಇದೆ. ಕಂಪ್ಯೂಟರ್ ಟೆಕ್ನಿಕಲ್ ಎರರ್ ನಿಂದಾಗಿ ಮೆಸೇಜ್ ಬರ್ತಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಬೇಗೂರು ಠಾಣೆಯ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ ಎಂದು ಆರೋಗ್ಯ ಇಲಾಖೆ ಹೇಳಿತ್ತು. ಸಿಬ್ಬಂದಿ ಮತ್ತೊಮ್ಮೆ ಸ್ವ್ಯಾಬ್ ಟೆಸ್ಟ್ ಗೆ ಒಳಪಡಿಸಿದಾಗ ನೆಗೆಟಿವ್ ಎಂದು ವರದಿ ಬಂದಿತ್ತು. ವರದಿ ಅದಲು ಬದಲು ಆಗಿದ್ದರಿಂದ ಸೋಂಕು ತಗುಲಿದ್ದರೂ ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಎಂದು ಹೇಳಿತ್ತು. ಇಲಾಖೆಯ ಲೋಪದೋಷ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.