ಬೆಂಗಳೂರು: ವಿಧಾನ ಪರಿಷತ್ತಿನ 140ನೇ ಅಧಿವೇಶನದ ಮೊದಲ ದಿನದ ಕಲಾಪದಲ್ಲಿ ಇತ್ತೀಚೆಗೆ ನಿಧನರಾದ 17 ಗಣ್ಯರಿಗೆ ಸಂತಾಪ ಸೂಚಿಸಿ, ಪರಿಷತ್ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಮೊದಲ ದಿನದ ಕಲಾಪ ವಂದೇ ಮಾತರಂ ಗೀತೆಯೊಂದಿಗೆ ಆರಂಭಿಸಲಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಮಾಜಿ ರಾಜ್ಯಪಾಲ ಟಿ.ಎನ್ ಚತುರ್ವೇದಿ, ವಿಧಾನಸಭೆ ಮಾಜಿ ಉಪಾಸಭಾಧ್ಯಕ್ಷ ಡಿ.ಮಂಜುನಾಥ್, ಮಾಜಿ ಸಚಿವ ವೈಜನಾಥ ಪಾಟೀಲ್,ಮಾಜಿ ಎಂಎಲ್ಸಿ ಜಿ ಮಾದಪ್ಪ, ಮಾಜಿ ಸಚಿವ ಮಲ್ಲಾರಿಗೌಡ ಶಂಕರಗೌಡ ಪಾಟೀಲ್ ಮತ್ತು ಅಮರನಾಥ ಶೆಟ್ಟಿ, ಮಾಜಿ ಶಾಸಕ ನಾರಾಯಣರಾವ್ ಗೋವಿಂದ ತರಳೆ, ಚಂದ್ರಕಾಂತ್ ಗುರುಪಾದಪ್ಪ ಸಿಂದೋಲ್, ವಿಶ್ವೇಶತೀರ್ಥ ಶ್ರೀಗಳು, ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್, ಹಿರಿಯ ಲೇಖಕ ಡಾ.ಚಿದಾನಂದ ಮೂರ್ತಿ, ಯಕ್ಷಗಾನ ಪಾರಂಗತ ಹೊಸ್ತೋಟ ಮಂಜುನಾಥ ಭಾಗವತ, ಹಿರಿಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ್, ಕೃಷಿ ವಿಜ್ಞಾನಿ ಪ್ರೊ. ಎಸ್.ಎಸ್. ಕಟಗಿಹಳ್ಳಿಮಠ, ನಾಸಾ ನಿವೃತ್ತ ಡಾ.ನವರತ್ನ ಶ್ರೀನಿವಾಸ ರಾಜರಾಮ್, ಹಿರಿಯ ಸಾಹಿತಿ ಚಂದ್ರಕಾಂತ್ ಕರದಳ್ಳಿ, ಸಂಗೀತ ಶಾಸ್ತ್ರಜ್ಞ ಡಾ.ಆರ್.ಸತ್ಯನಾರಾಯಣ ನಿಧನಕ್ಕೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸಂತಾಪ ಸೂಚಿಸಿದರು.
ಆಡಳಿತ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಂತಾಪ ಸೂಚನೆಗೆ ಅನುಮೋದನೆ ನೀಡಿ ಅಗಲಿದ ಗಣ್ಯರು ಸಲ್ಲಿಸಿದ ಸೇವೆ, ನೀಡಿದ ಕೊಡುಗೆಯನ್ನು ಸ್ಮರಿಸಿದರು. ಸಂತಾಪ ಸೂಚನೆ ಬಳಿಕ ಪರಿಷತ್ ಕಲಾಪವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ನಾಳೆ ಬೆಳಗ್ಗೆ 10.30 ಕ್ಕೆ ಮುಂದೂಡಿದರು.
ಇಬ್ರಾಹಿಂ ಆಕ್ಷೇಪ: ಸಂತಾಪ ಸೂಚನೆಗೆ ಎಲ್ಲರಿಗೂ ಮಾತನಾಡಲು ಅಪೇಕ್ಷೆ ಇರಲಿದೆ ಆದರೆ ಎಲ್ಲರಿಗೂ ಅವಕಾಶ ನೀಡುವುದು ಸರಿಯಲ್ಲ ಎಂದು ಸಂತಾಪ ಸೂಚನೆ ಆರಂಭದಲ್ಲೇ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿಗಳು ಮಾತ್ರ ಮಾತನಾಡಿದರೆ ಸಾಕು. ಇಲ್ಲವೇ ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಮಾತ್ರ ಮಾತನಾಡಿದರೆ ಸಾಕು ಎನ್ನುವ ಸಲಹೆ ನೀಡಿದರು. ಇನ್ನೂ ಕೆಲ ಹೆಸರನ್ನು ಸೇರಿಸಬೇಕಿತ್ತು ಮುಂದಿನ ಬಾರಿ ಸಂತಾಪ ಸೂಚನೆಗೆ ಸದಸ್ಯರಿಂದಲೂ ಹೆಸರು ಪಡೆಯಲು ಪರಿಷತ್ ಸಿಬ್ಬಂದಿಗೆ ಸೂಚಿಸಿ ಎನ್ನುವ ಸಲಹೆ ನೀಡಿದರು.
ಪ್ರತಿಪಕ್ಷ ಸಾಲಿನಲ್ಲಿ ನಾರಾಯಣಗೌಡ : ನೂತನವಾಗಿ ಸಚಿವರಾದ ನಾರಾಯಣಗೌಡ ಮೊದಲ ದಿನದ ವಿಧಾನಪರಿಷತ್ ಕಲಾಪಕ್ಕೆ ಹಾಜರಾದರು. ಮಾಜಿ ಸ್ನೇಹಿತರಾದ ಜೆಡಿಎಸ್ ಸದಸ್ಯರು ಇರುವ ಕಡೆಗೆ ತೆರಳಿ ಎಲ್ಲರಿಗೂ ಹಸ್ತಲಾಘವ ನೀಡಿದರು. ಪ್ರತಿಯೊಬ್ಬ ಜೆಡಿಎಸ್ ಸದಸ್ಯರ ಜೊತೆಗೂ ಆತ್ಮೀಯ ಮಾತುಕತೆ ನಡೆಸಿ ಗಮನ ಸೆಳೆದರು. ಸದನದಲ್ಲಿ ಇರುವಷ್ಟು ಸಮಯವೂ ಪ್ರತಿಪಕ್ಷ ಸಾಲಿನಲ್ಲೇ ಕುಳಿತಿದ್ದು ವಿಶೇಷವಾಗಿತ್ತು.