ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕೈಗೊಂಡಿದ್ದ ಪ್ರತಿಭಟನೆ ವೇಳೆ, ಸರ್ಕಾರಿ ಬಸ್ಗಳಿಗೆ ಹಾನಿ ಮಾಡಿದವರು ಹಾಗೂ ಪ್ರತಿಭಟನೆಗೆ ಅನುಮತಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ರವಿಕುಮಾರ್ ಕಂಚನಹಳ್ಳಿ ಎಂಬವರು ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಡಿಕೆಶಿ ಬಂಧನ ವಿರುದ್ಧ ಪ್ರತಿಭಟಿಸಿದ್ದಲ್ಲದೆ ಸರ್ಕಾರಿ ಬಸ್ ಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆಯಲಾಗಿದೆ. ಹೀಗಾಗಿ ಮೆರವಣಿಗೆಗೆ ಅನುಮತಿ ನೀಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲಿಸಿ, ವಿಚಾರಣೆಗೆ ಅಗತ್ಯವಿರುವ ಕಾರಣ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳ ವಶಕ್ಕೆ ನೀಡಿದೆ. ಡಿ.ಕೆ ಶಿವಕುಮಾರ್ ಬಂಧನ ವಿರುದ್ಧ ಪ್ರತಿಭಟನೆ ನಡೆಸುವುದು ಹಾಗೂ ಅವಕಾಶ ನೀಡುವುದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.