ಬೆಂಗಳೂರು: ಕಟ್ಟಡ ನಿರ್ಮಾಣ ಮಾಡದೆ ಕಾಗದದಲ್ಲಿ ಕಾಮಗಾರಿ ನಡೆಸಿರುವುದಾಗಿ ದಾಖಲಾತಿ ಸೃಷ್ಟಿಸಿ 97 ಕೋಟಿ ರೂಪಾಯಿ ಗುಳುಂ ಮಾಡಿರುವ ಆರೋಪ ನಗರಾಭಿವೃದ್ಧಿ ಸಚಿವ ಹಾಗೂ ಕೆಆರ್ ಪುರ ಶಾಸಕ ಬೈರತಿ ಬಸವರಾಜ್ ವಿರುದ್ಧ ಕೇಳಿಬಂದಿದೆ. ಬೈರತಿ ಬಸವರಾಜ್, ಮಾಜಿ ಕಾರ್ಪೋರೇಟರ್ ಶ್ರೀಕಾಂತ್ ಹಾಗೂ ಮಹದೇವಪುರ ವಲಯ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ 10 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಎಲ್ಲವೂ ಕಾಗದಪತ್ರದಲ್ಲೇ ಕಟ್ಟಡ ನಿರ್ಮಾಣ - ಅಬ್ರಾಹಂ: ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಬ್ರಾಹಂ 'ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣ ಮಂಜೂರು ಮಾಡಿಸಿ ಕಾಮಗಾರಿ ನಡೆಸದೆ ಎಲ್ಲವೂ ಕಾಗದಪತ್ರದಲ್ಲೇ ಕಟ್ಟಡ ನಿರ್ಮಾಣ ಮಾಡಿಸಿರುವುದಾಗಿ ದಾಖಲೆ ಸೃಷ್ಟಿಸಿ 97 ಕೋಟಿ ರೂಪಾಯಿ ವಂಚಿಸಿದ್ದಾರೆ. ವಂಚನೆ ಜಾಲದ ಹಿಂದೆ ಪ್ರಮುಖವಾಗಿ ಸಚಿವ ಬೈರತಿ ಬಸವರಾಜ್ ಅವರ ಕೈವಾಡವಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ರಾಜ್ಯ ಸರ್ಕಾರ ಕಲ್ಯಾಣ ಮತ್ತು ಅಭಿವೃದ್ಧಿ ನಿಧಿಗಳನ್ನು ಬಳಸಿಕೊಳ್ಳಲು ಮರೆತಿದೆ: ಸುರ್ಜೇವಾಲಾ ಬೇಸರ
ಕಾಮಗಾರಿಗಳಿಗೆ ನಿರ್ಮಾಣ ಮಾಡದೆ ಹಣ ಬಿಡುಗಡೆ - ಟಿ ಜೆ ಅಬ್ರಾಹಂ: ಕೆಆರ್ ಪುರ ಕ್ಷೇತ್ರಕ್ಕೆ ಇದುವರೆಗೂ ಬಿಬಿಎಂಪಿಗೆ ಸಂಬಂಧಿಸಿದಂತೆ 1883 ಕಾಮಗಾರಿಗಳಿಗೆ 488 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಈ ಪೈಕಿ 97 ಕೋಟಿ ರೂಪಾಯಿ ಕಾಮಗಾರಿಗಳಿಗೆ ನಿರ್ಮಾಣ ಮಾಡದೆ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ 373 ಮಂದಿ ಗುತ್ತಿಗೆದಾರರಿದ್ದಾರೆ. 155 ಮಂದಿ ಗುತ್ತಿಗೆದಾರರಿಗೆ ಒಂದು ಗುತ್ತಿಗೆ ನೀಡಿದರೆ 78 ಮಂದಿ ಎರಡು ಗುತ್ತಿಗೆ ಹಾಗೂ 41 ಮಂದಿ ಮೂರು ಕಾಮಗಾರಿಗಳಿಗೆ ಆದೇಶ ಪಡೆದಿದ್ದಾರೆ.
ಇದನ್ನೂ ಓದಿ:ಲಂಚ ಆರೋಪ; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಹೈಕೋರ್ಟ್
ಮುಖ್ಯವಾಗಿ ಇನ್ನೂ 15 ಮಂದಿ ಗುತ್ತಿಗೆದಾರರಿಗೆ 848 ಕಾಮಗಾರಿಗಳಿಗೆ ಕಾರ್ಯಾದೇಶ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ದೇವಸಂದ್ರ ವಾರ್ಡ್ ವೊಂದರಲ್ಲಿ ಶೌಚಾಲಯ ನಿರ್ಮಿಸದೆ ಅದರ ಹೆಸರಿನಲ್ಲಿ ಹಣ ಗುಳುಂ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆಯಿದೆ ಎಂದರು.
ಭೂ ಕಬಳಿಕೆ ಆರೋಪ ಹೊತ್ತಿದ್ದ ಬಸವರಾಜ್: 2022ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡಿದ್ದಾರೆಂಬ ಆರೋಪ ಬಂದಿತ್ತು. ಪ್ರಕರಣವೇನೆಂದರೆ ಅದೂರ್ ಅಣ್ಣೈಯಪ್ಪ ಎಂಬುವರಿಗೆ 22.43 ಎಕರೆ ಜಾಗ ಸೇರಿತ್ತು. 2003ರ ಮೇ 21ರಂದು ಸಂಬಂಧಿಕರಾದ ಮಾದಪ್ಪ ಮತ್ತು ಪಿಳ್ಳ ಮಾದಪ್ಪ ಅವರು ಖಾಲಿ ಕಾಗದಗಳ ಮೇಲೆ ಅದೂರ್ ಅಣ್ಣೈಯಪ್ಪ ಅವರ ಸಹಿ ಮತ್ತು ಹೆಬ್ಬೆಟ್ಟು ಪಡೆದುಕೊಂಡು, ಕರಾರು ಸಿದ್ಧಪಡಿಸಿಕೊಂಡು ಸಚಿವ ಭೈರತಿ ಬಸವರಾಜ್ ಅವರಿಗೆ ಕೆಲ ದಿನಗಳಲ್ಲಿ ಅಕ್ರಮವಾಗಿ ಆ 22.43 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅದೂರ್ ಅಣ್ಣೈಯಪ್ಪ ಅವರ ಪುತ್ರ ಮಾದಪ್ಪ ಖಾಸಗಿ ದೂರು ದಾಖಲಿಸಿದ್ದರು. ಕೊನೆಗೆ ಹೈಕೋರ್ಟ್ ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಪುರಸ್ಕರಿಸಿದ್ದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ನ್ಯಾಯಪೀಠ, ಪ್ರಕರಣವು ಸಿವಿಲ್ ವ್ಯಾಜ್ಯವಾಗಿರುವುದರಿಂದ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಇದನ್ನೂ ಓದಿ: ನೈಸ್ ಸಂಸ್ಥೆ ವಶಕ್ಕೆ ಪಡೆದ ಭೂಮಿ ರೈತರಿಗೆ ವಾಪಸ್ ನೀಡಲು ತೀರ್ಮಾನ: ಎಸ್.ಟಿ.ಸೋಮಶೇಖರ್