ಬೆಂಗಳೂರು: ಕಳೆದೊಂದು ವರ್ಷದಿಂದ ಆಕಸ್ಮಿಕ ಮರಣಕ್ಕೆ ಗುರಿಯಾಗುವ ಕುರಿಗಳಿಗೆ ಪರಿಹಾರ ನಿಲ್ಲಿಸಿರುವುದಕ್ಕೆ ಬಿಜೆಪಿ ಶಾಸಕಿ ಪೂರ್ಣಿಮಾ ಆಕ್ಷೇಪ ವ್ಯಕ್ತಪಡಿಸಿದರು.
ಓದಿ: ರಾಜ್ಯದಲ್ಲಿಂದು 395 ಮಂದಿಗೆ ಕೋವಿಡ್ ಪಾಸಿಟಿವ್: ಮೂವರು ಸೋಂಕಿಗೆ ಬಲಿ
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯ ವೇಳೆ ಸರ್ಕಾರದ ಗಮನ ಸೆಳೆದ ಶಾಸಕಿ, ಕುರಿಗಳ ಆಕಸ್ಮಿಕ ಸಾವಿಗೆ 5,000 ರೂ. ಪರಿಹಾರ ನೀಡಲಾಗುತ್ತದೆ. ಅದನ್ನು ಈಗ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಅರ್ಜಿಯನ್ನು ಸ್ವೀಕರಿಸುತ್ತಿಲ್ಲ. ಆರ್ಥಿಕ ಸಂಕಷ್ಟದ ಹಿನ್ನೆಲೆ ಅನುದಾನ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ.
ಈ ಯೋಜನೆಯನ್ನು ಲಕ್ಷಾಂತರ ಕುಟುಂಬ ನೆಚ್ಚಿಕೊಂಡಿದೆ. ಹಾಗಾಗಿ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರೂ ದನಿಗೂಡಿಸಿದರು. ಆಕಸ್ಮಿಕ ಮರಣ ಹೊಂದಿದ ಕುರಿಗಳಿಗೆ ಪರಿಹಾರ ಕೊಡಲೇಬೇಕು ಎಂದು ಆಗ್ರಹಿಸಿದರು.
ಸದಸ್ಯರ ಆಗ್ರಹ ಹೆಚ್ಚಾಗುತ್ತಿದ್ದ ಹಾಗೆ ಪರಿಹಾರ ಕೊಡುವ ಬಗ್ಗೆ ಸಿಎಂ ಜೊತೆಗೆ ಮಾತನಾಡುತ್ತೇನೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಭರವಸೆ ನೀಡಿದರು. ಆರ್ಥಿಕ ಸಂಕಷ್ಟದ ಹಿನ್ನೆಲೆ ಅನುದಾನ ಸ್ಥಗಿತಗೊಳಿಸಲಾಗಿದೆ. ಪರಿಹಾರ ನೀಡಲು ಬಜೆಟ್ನಲ್ಲಿ ಅನುದಾನ ನೀಡಿರುವುದಿಲ್ಲ. ಸದಸ್ಯರು ಸಲಹೆ ಸೂಚನೆ ನೀಡಿದ್ದಾರೆ. ನಮಗೂ ಪರಿಹಾರ ನೀಡುವ ಇಚ್ಛೆ ಇದೆ. ಸಿಎಂ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿ ಪರಿಹಾರ ಕೊಡುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.