ಬೆಂಗಳೂರು: ಯಾವುದೇ ಸಮುದಾಯಕ್ಕೆ ತಮ್ಮ ಪಕ್ಷದ ಕಚೇರಿಗೆ ಬರಬೇಡಿ ಎಂದು ಹೇಳೋದು ಸರಿಯಲ್ಲ. ಇದು ತಪ್ಪು ಕೆಲಸ ಎಂದು ಲಿಂಗಾಯತರಿಗೆ ಬಿಜೆಪಿ ಕಚೇರಿಗೆ ನಿರ್ಬಂಧ ವಿಚಾರ ಸಂಬಂಧ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಕಚೇರಿಗೆ ಲಿಂಗಾಯತ ಸಮುದಾಯ ನಿರ್ಬಂಧ ವಿಷಯ ಸತ್ಯ, ಆದರೆ ಅದು ಬಹಳ ತಪ್ಪು ನಿರ್ಧಾರವಾಗಲಿದೆ. ಲಿಂಗಾಯತರ ಬೆಂಬಲ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಸಿಕ್ಕಿದೆ. ಇಷ್ಟಾದರೂ ಈ ರೀತಿ ಅಪಮಾನ ಸರಿಯಲ್ಲ. ಯಡಿಯೂರಪ್ಪ ಆದಿಯಾಗಿ ಎಲ್ಲರೂ ಈ ಸಂಬಂಧ ವಿಚಾರ ಮಾಡಬೇಕು ಎಂದರು.
ಸ್ಪೀಕರ್ಗೆ ಸಲಹೆಗಾರ ಹುದ್ದೆ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೋ ಇಲ್ವೋ ಗೊತ್ತಿಲ್ಲ. ಇದನ್ನ ಸ್ಪೀಕರ್ ಬಳಿಯೇ ಕೇಳಬೇಕು. ಸಚಿವರಿಗೆ ಸಲಹೆಗಾರರಾಗಿ ಇರುವುದು ನೋಡಿದ್ದೇವೆ. ಆದರೆ ಸ್ಪೀಕರ್ಗೆ ಸಲಹೆಗಾರರು ಇರ್ತಾರಾ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ಕಡೆಗಣನೆ ವಿಷಯ ಅವರ ಪಕ್ಷದ ಆಂತರಿಕ ವಿಚಾರ ಆ ಬಗ್ಗೆ ನಾನು ಏನೂ ಹೇಳಲ್ಲ, ಈ ಬಗ್ಗೆ ಯಡಿಯೂರಪ್ಪನವರೇ ಹೇಳಬೇಕು ಎಂದರು.
ಗೋಕಾಕ್ ಜಿಲ್ಲೆ ರಚನೆ ಕುರಿತು ಏಕಾಎಕಿ ನಿರ್ಧಾರ ಮಾಡುವುದಲ್ಲ. ಅದಕ್ಕೊಂದು ಉಪ ಸಮಿತಿ ರಚನೆ ಮಾಡಬೇಕು. ಜೊತೆಗೆ ಸ್ಥಳೀಯರನ್ನ ಗಮನದಲ್ಲಿ ಇಟ್ಟುಕೊಂಡು ಅವರ ಜೊತೆಗೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲಿ ಚರ್ಚೆ ಮಾಡಿ ಘೋಷಣೆ ವಿಚಾರ ಹೊರ ಬಿಡಬೇಕೆ ಹೊರತು ಚರ್ಚೆ ಮಾಡದೆ ಏಕಾಎಕಿ ಜಿಲ್ಲೆ ರಚನೆ ವಿಚಾರ ಹೊರಬಿಡಬಾರದು. ಈ ಸರ್ಕಾರದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಟೀಕಿಸಿದರು.