ಬೆಂಗಳೂರು : ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಾಳೆ ರೈತ ಸಂಘಟನೆಗಳು ಕರೆದಿರುವ ರಾಜ್ಯ ಬಂದ್ ಹಿನ್ನೆಲೆ ನಗರ ಪೊಲೀಸ್ ಇಲಾಖೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿದ್ದಾರೆ.
ರೈತ ಸಂಘಟನೆಗಳು ಕರೆದಿರುವ ಬಂದ್ ಹಿನ್ನೆಲೆ ನಮ್ಮಿಂದ ಯಾವುದೇ ಪ್ರತಿಭಟನೆಗೂ ಅನುಮತಿ ಕೊಟ್ಟಿಲ್ಲ. ಮುಂಜಾಗ್ರತಾ ಕ್ರಮವಾಗಿ ಸಿಟಿಯಲ್ಲಿ ಹೆಚ್ಚಿನ ಬಂದೋಬಸ್ತ್ ಹಮ್ಮಿಕೊಳ್ಳಲಾಗಿದೆ. ಯಾರಿಗೂ ಯಾವ ತರದ ಅಡ್ಡಿ ಮಾಡಲು ಅವಕಾಶ ಇಲ್ಲ. ಇಂದು ಈ ಬಗ್ಗೆ ಮೀಟಿಂಗ್ ಮಾಡಿ ಚರ್ಚೆ ನಡೆಸಲಾಗಿದೆ. ನಗರ ಪೊಲೀಸರು, ಕೆಎಸ್ಆರ್ಪಿ 20 ತುಕಡಿ, ವಜ್ರ, ರಾಪಿಡ್ ಪೋರ್ಸ್ ಸೇರಿ 2 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆಗೆ ಅನುಮತಿ ಕೊಟ್ಟಿಲ್ಲ. ಯಾರಾದ್ರೂ ಆ ರೀತಿ ಪ್ರತಿಭಟನೆ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊವೀಡ್ ನಿಯಮಗಳು ಜಾರಿಯಲ್ಲಿವೆ. ಉಲ್ಲಂಘನೆಯಾದ್ರೆ ಕಾನೂನು ಕ್ರಮ ಆಗುತ್ತೆ. ಬಂದ್ ಬಗ್ಗೆ ಬಾಂಡ್ ಬರೆಯಿಸಿಕೊಳ್ಳಲಾಗುವುದು. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ ಎಂದರು.
ಬಂದ್ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾದಲ್ಲಿ ಅವರಿಂದ ವಸೂಲಿ ಮಾಡಲಾಗುವುದು. ಆದ್ದರಿಂದ ಪ್ರತಿಭಟನೆ ನಡೆಸುವವರಿಂದ ಬಾಂಡ್ ಬರೆಯಿಸಿಕೊಳ್ಳಲು ಸೂಚನೆ ನೀಡಲಾಗಿದೆ. ರೈತರ ಪ್ರತಿಭಟನೆ ಹಿನ್ನೆಲೆ ಸಿಲಿಕಾನ್ ಸಿಟಿ ಸುತ್ತ ನಾಳೆ ಬಿಗಿ ಪೊಲೀಸ್ ಭದ್ರತೆ ಇದ್ದು, ಇಬ್ಬರು ಹೆಚ್ಚುವರಿ ಆಯುಕ್ತರು, 10 ಡಿಸಿಪಿ, 60 ಎಸಿಪಿ, 140 ಇನ್‌ಸ್ಪೆಕ್ಟರ್, 300ಕ್ಕೂ ಹೆಚ್ಚು ಪಿಎಸ್ಐ ಸೇರಿ 2 ಸಾವಿರ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ.