ಬೆಂಗಳೂರು: ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಬಂದ್ ಹಿನ್ನೆಲೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಲ್ಲಾ ಪೊಲೀಸರಿಗೆ 22 ಸೂಚನೆಗಳನ್ನು ಹೊರಡಿಸಿದ್ದಾರೆ.
ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ಇನ್ಸ್ಪೆಕ್ಟರ್, ಡಿಸಿಪಿಗಳಿಗೆ 22 ಸೂಚನೆಗಳನ್ನು ರವಾನಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಪ್ರತಿಭಟನಾಕಾರರು ಸಾರ್ವಜನಿಕ ವಾಹನಗಳನ್ನು ತಡೆಯುವ ಸಾಧ್ಯತೆ ಇರುವ ಹಿನ್ನೆಲೆ ಎಲ್ಲೆಡೆ ಪೊಲೀಸರು ತೀವ್ರ ನಿಗಾವಹಿಸಬೇಕಿದೆ. ನಗರದ ಕಾರ್ಖಾನೆ, ಗಾರ್ಮೆಂಟ್ಸ್ ಬಳಿ ಅಗತ್ಯ ಬಂದೋಬಸ್ತ್ ಮಾಡಬೇಕು. ಪ್ರತಿಭಟನೆ ಸಂಬಂಧ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಲಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ. ಪ್ರತಿಭಟನೆ ವೇಳೆ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿ ಹದಗೆಡಿಸಬಹುದಾದ ಸಾಧ್ಯತೆ ಇರುವ ಹಿನ್ನೆಲೆ ಇನ್ಸ್ಪೆಕ್ಟರ್ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ಘಟನೆಯ ವಿಡಿಯೋವನ್ನು ಚಿತ್ರೀಕರಣ ಮಾಡಬೇಕು.
ಮುನ್ನೆಚ್ಚರಿಕಾ ಕ್ರಮವಾಗಿ ಇಂತಹ ವ್ಯಕ್ತಿಗಳನ್ನ ವಶಕ್ಕೆ ಪಡೆಯಬೇಕು ಹಾಗೂ ಬೆಂಕಿ ಹಚ್ಚಲು ಟೈರ್ಗಳು ಸಿಗದಂತೆ ನೋಡಿಕೊಳ್ಳಬೇಕು. ಎಲ್ಲಾ ಆಧಿಕಾರಿಗಳು ರಿವಾಲ್ವರ್, ವಾಕಿಟಾಕಿ, ಹೆಲ್ಮೆಟ್, ಲಾಠಿ, ಬಾಡಿ ಪ್ರೊಟೆಕ್ಟರ್ ಸಮೇತ ಕರ್ತವ್ಯಕ್ಕೆ ಹಾಜರಾಗಬೇಕು. ಪೊಲೀಸರು ಸಾರ್ವಜನಿಕರ ಜೊತೆ ಸೌಹಾರ್ದಯುತವಾಗಿ ವರ್ತಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಪೆಟ್ರೋಲ್ ಬಂಕ್, ಬ್ಯಾಂಕ್, ಬಸ್ ಡಿಪೋಗಳಲ್ಲಿ ಭದ್ರತೆ ಕಲ್ಪಿಸಬೇಕು. ಕೇಂದ್ರ ಸರ್ಕಾರದ ಕಚೇರಿಗಳು, ಐಟಿ-ಬಿಟಿ, ಮಾಲ್ಗಳು, ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಬೇಕು. ಸಿಎಂ, ಸಚಿವರು, ಕೇಂದ್ರ ಸಚಿವರು, ಸಂಸದರ ನಿವಾಸ ಮತ್ತು ಅವರ ಕಚೇರಿಗಳಿಗೆ ಪೊಲೀಸ್ ಸರ್ಪಗಾವಲು ಹಾಕುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ.