ಬೆಂಗಳೂರು: ಜಮಖಂಡಿ ಉಪಚುನಾವಣೆ ವೇಳೆ ಡಿಸಿಎಂ ಡಾ.ಜಿ. ಪರಮೇಶ್ವರ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ವಿಚಾರಣೆ ನಡೆಸಿ ಸಮನ್ಸ್ಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ವಿಚಾರಣೆಯನ್ನ ಜು.04 ಕ್ಕೆ ಮುಂದೂಡಿಕೆ ಮಾಡಿದೆ.
ಜಮಖಂಡಿ ಉಪಚುನಾವಣೆ ವೇಳೆ, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ.ಜಿ. ಪರಮೇಶ್ವರ್ಗೆ ಸಿಟಿ ಸಿವಿಲ್ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ಗೆ ಪರಮೇಶ್ವರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇಂದು ಹೈಕೋರ್ಟ್ ಪೀಠದಲ್ಲಿ ವಿಚಾರಣೆಗೆ ಬಂದಿದ್ದು, ಸಮನ್ಸ್ಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ವಿಚಾರಣೆಯನ್ನ ಜು.04 ಕ್ಕೆ ಮುಂದೂಡಿಕೆ ಮಾಡಿದೆ.
ಪ್ರಕರಣದ ಹಿನ್ನೆಲೆ:
2018 ಅ. 24ರಂದು ಸಾವಳಗಿ ಪೊಲೀಸ್ ಠಾಣೆಯಲ್ಲಿ ಡಿಸಿಎಂ ಪರಮೇಶ್ವರ್ ವಿರುದ್ಧ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದರು. ದೂರಿನಲ್ಲಿ ಜಮಖಂಡಿ ಉಪಚುನಾವಣೆಯ ವೇಳೆ ಕಾಂಗ್ರೇಸ್ ಅಭ್ಯರ್ಥಿ ಆನಂದ್ ಸಿದ್ದು ನ್ಯಾಮಗೌಡ ಪರವಾಗಿ ಪ್ರಚಾರ ಮಾಡುವ ವೇಳೆ ಜಂಬಗಿ - ಸಾವಳಗಿ ರಸ್ತೆಯನ್ನ 3 ತಿಂಗಳಲ್ಲಿ ಡಾಂಬರಿಕರಣ ಮಾಡುತ್ತೇವೆ. ಅದಕ್ಕೆ ನೀವು ಕಾಂಗ್ರೆಸ್ ಅಭ್ಯರ್ಥಿಗೆ ಓಟ್ ಹಾಕಿ ಎಂದು ಆಮಿಷ ಒಡ್ಡಿದ್ದರು.
ಈ ಸಂಬಂಧ ಪೊಲೀಸರು ಆರ್ಪಿ ಆಕ್ಟ್ ಸೆಕ್ಷನ್ 123 ಹಾಗೂ ಐಪಿಸಿ ಸೆಕ್ಷನ್ 171 (F) ಅಡಿ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ಆವರಣದ ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳ ವಿಚಾರಣೆ ನ್ಯಾಯಾಲಯದ ಮುಂದೆ ಬಂದಿತ್ತು. ನ್ಯಾಯಾಲಯ ಡಾ. ಜಿ ಪರಮೇಶ್ವರ್ರಿಗೆ ನಾಳೆ ವಿಚಾರಣೆ ಹಾಜರಾಗಲು ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಹೀಗಾಗಿ ವಿಚಾರಣೆ ತಪ್ಪಿಸಿಕೊಳ್ಳಲು ಪರಮೇಶ್ವರ್ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಲಾಗಿದೆ.