ಬೆಂಗಳೂರು: ಪದೇ ಪದೆ ಮುಂದೂಡಿಕೆಯಾಗುತ್ತಿದ್ದ ಮುಖ್ಯಮಂತ್ರಿಗಳ ದೆಹಲಿ ಪ್ರವಾಸಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ಜನವರಿ 12ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದು, ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.
ಜನವರಿ 12ರಂದು ಸಿಎಂ ದೆಹಲಿಗೆ ಪ್ರಯಾಣಿಸುತ್ತಿದ್ದು, 12 ಮತ್ತು 13ರಂದು ದೆಹಲಿಯಲ್ಲಿಯೇ ಇದ್ದು ವರಿಷ್ಠರನ್ನು ಭೇಟಿಯಾಗಲಿದ್ದಾರೆ. ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ಒಪ್ಪಿಗೆ ಪಡೆಯಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆ ಸಿಎಂ ಮಾತುಕತೆ ನಡೆಸಿದ್ದು ಪಟ್ಟಿಯೊಂದಿಗೆ ದೆಹಲಿಗೆ ಬರುವಂತೆ ತಿಳಿಸಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿ ಕೂಡ ರಾಜ್ಯ ಭೇಟಿ ವೇಳೆ ದೆಹಲಿಗೆ ಬರುವಂತೆ ಸಿಎಂಗೆ ಸೂಚನೆ ನೀಡಿದ್ದರು, ಅದರಂತೆ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ.
ಉಪ ಚುನಾವಣೆಯಲ್ಲಿ ಗೆದ್ದು ಅನರ್ಹತೆ ಪಟ್ಟ ಕಳೆದುಕೊಂಡು ನೂತನ ಶಾಸಕರಾಗಿ ಆಯ್ಕೆಯಾದವರು, ಪಕ್ಷದ ಹಿರಿಯ ಆಕಾಂಕ್ಷಿಗಳ ಜೊತೆ ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. ಹೀಗಾಗಿ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಸಂಬಂಧ ಹೈಕಮಾಂಡ್ ಜೊತೆ ಸಿಎಂ ಚರ್ಚಿಸಲಿದ್ದಾರೆ.