ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ಕಟ್ಟಡ 'ಆರೋಗ್ಯ ಸೌಧ'ವನ್ನ ಸಿಎಂ ಯಡಿಯೂರಪ್ಪ ಇಂದು ಉದ್ಘಾಟಿಸಿದರು.
ಆನಂದ್ ರಾವ್ ಸರ್ಕಲ್ನಲ್ಲಿ ಇದ್ದ ಆರೋಗ್ಯ ಇಲಾಖೆಯನ್ನು ಮಾಗಡಿ ರಸ್ತೆಗೆ ಶಿಫ್ಟ್ ಮಾಡಲಾಗಿದ್ದು, ವಿವಿಧ ವಿಭಾಗಗಳು ಒಂದೇ ಸೂರಿನಡಿ ತರಬೇಕೆಂಬ ಸರ್ಕಾರದ ಕನಸು ನನಸಾಗಿದೆ. ಇನ್ನು ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪರಿಗೆ ಡಿಸಿಎಂ ಗೋವಿಂದ ಕಾರಜೋಳ, ಆರೋಗ್ಯ & ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಇಲಾಖೆಯ ಆಯುಕ್ತ ಪಂಜಕ್ ಕುಮಾರ್ ಪಾಂಡೆ, ಎಸಿಎಸ್ ಜಾವೇದ್ ಅಕ್ತರ್ ಸಾಥ್ ನೀಡಿದರು.
ಉದ್ಘಾಟನೆ ಬಳಿಕ ಮಾತಾಡಿದ ಸಿಎಂ ಬಿಎಸ್ವೈ, 238 ಕೋಟಿ ರೂ. ವೆಚ್ಚದಲ್ಲಿ 2 ಹಂತಗಳಲ್ಲಿ ಕಟ್ಟಡ ನಿರ್ಮಾಣವಾಗಿದೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಖಾಲಿಯಿರುವ 1,500 ತಜ್ಞ ವೈದ್ಯರ ಹುದ್ದೆ ಭರ್ತಿಗೂ ಕರೆ ನೀಡಲಿದ್ದೇವೆ ಎಂದರು.
ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸುಸಜ್ಜಿತ ಕಟ್ಟಡ, ಸೌಲಭ್ಯಗಳನ್ನು ಕಲ್ಪಿಸುತ್ತಿದ್ದೇವೆ. ಇಲ್ಲಿನ ವೈದ್ಯರಲ್ಲಿ ಕೈ ಮುಗಿದು ಕೇಳಿಕೊಳ್ತೀನಿ. ಬರುವ ರೋಗಿಗಳನ್ನು ತಮ್ಮ ಮನೆ ಮಕ್ಕಳಂತೆ ಶುಶ್ರೂಷೆ ಮಾಡಿ. ಈ ಕಟ್ಟಡ ನಿರ್ಮಿಸಿದ್ದಕ್ಕೂ ಅರ್ಥ ಸಿಗುತ್ತೆ ಎಂದು ಹೇಳಿದರು. ಎಂಬಿಬಿಎಸ್ ವೈದ್ಯರು ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಅವರು ಗಮನ ಹರಿಸಬೇಕು ಎಂದರು.
ನಂತರ ಮಾತನಾಡಿದ ಸಚಿವ ಡಾ. ಕೆ.ಸುಧಾಕರ್, ಬಹುಶಃ ದೇಶದಲ್ಲಿ ಇಂತಹ ಅದ್ಭುತ, ಆಧುನಿಕ ಕಟ್ಟಡವಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 53 ಕಚೇರಿಗಳು ಒಂದೇ ಸೂರಿನಡಿ ಕೆಲಸ ಮಾಡಲಿವೆ. ಆರೋಗ್ಯವೇ ಭಾಗ್ಯ, ಆರೋಗ್ಯ ಕ್ಷೇತ್ರಕ್ಕೆ ಚೈತನ್ಯ ತುಂಬುವ ಕೆಲಸ ಆಗಬೇಕು. ಕಳೆದ ಒಂದು ವರ್ಷದಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳು ಇಲ್ಲ. ಆ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳಿಗೆ ಅನುಮೋದನೆ ನೀಡಲಿದ್ದಾರೆ. ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿಗಳಲ್ಲಿ ಈಗಾಗಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಶುರುವಾಗಿವೆ ಎಂದು ತಿಳಿಸಿದರು.
ಕೇರಳ ಮಾಡೆಲ್, ತಮಿಳುನಾಡು ಮಾಡೆಲ್ ಅಂತಾರೆ. ಅದೇ ರೀತಿ ಕರ್ನಾಟಕ ಮಾಡೆಲ್ ಎನ್ನಬೇಕು. ಆ ರೀತಿ ಕೆಲಸಗಳು ಆಗಬೇಕು ಅಂತ ಸಿಎಂ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನಾವೂ ಯೋಚಿಸುತ್ತಿದ್ದೇವೆ ಎಂದರು.
ಬಳಿಕ ಡಿಸಿಎಂ ಗೋವಿಂದ ಕಾರಜೋಳ ಮಾತಾಡಿ, ಈ ಕಟ್ಟಡದಿಂದ ಜನರಿಗೆ, ಆಡಳಿತಕ್ಕೆ ಒಳ್ಳೆಯದು. 53 ವಿಭಾಗಗಳ 1,500 ಜನ ಒಂದೇ ಕಡೆ ಕೆಲಸ ಮಾಡುತ್ತಾರೆ. ಸಮಾಜದ ಅತ್ಯಂತ ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಬಡವರ ಪ್ರಾಣ ಉಳಿಸೋಕೆ ಭಗವಂತ ಅವಕಾಶವ ನೀಡಿದ್ದಾನೆ. ಸೇವಾ ಮನೋಭಾವದಿಂದ ಎಲ್ಲರೂ ಕೆಲಸ ಮಾಡಬೇಕು ಎಂದರು.