ಬೆಂಗಳೂರು: ಬಜೆಟ್ ಮಂಡನೆಗೆ ಮುಂದಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಲ್ಪ ಕಾಲ ಕಿರಿಕಿರಿ ಅನುಭವಿಸಿದ ಪ್ರಸಂಗ ಇಂದು ವಿಧಾನಸಭೆಯಲ್ಲಿ ನಡೆಯಿತು.
ಇಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆಗೆ ಮುಂದಾದರು. ಆಗ ಪ್ರತಿಪಕ್ಷದ ಸದಸ್ಯರು ಬಜೆಟ್ ಪ್ರತಿ ನೀಡದಿರುವ ಕುರಿತು ಆಕ್ಷೇಪಿಸಿ ಸದನದ ಸದಸ್ಯರಿಗೆ ಬಜೆಟ್ ಪ್ರತಿ ನೀಡದಿರುವ ಬಗ್ಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿ, ನಾವು ಸಹಕಾರ ಕೊಡುತ್ತೇವೆ. ಆದರೆ ನೀವು ಬಜೆಟ್ ಪ್ರತಿಯನ್ನು ಕೊಡದೆ ಇರುವುದು ಸರಿಯಲ್ಲ ಎಂದರು.
ಆಗ ಕಳೆದ ಬಜೆಟ್ ಮಂಡನೆ ವೇಳೆಯೂ ಇದೇ ಕ್ರಮ ಅನುಸರಿಸಲಾಗಿತ್ತು ಎಂದು ಸಚಿವ ಮಾಧುಸ್ವಾಮಿ ಸಮಜಾಯಿಷಿ ನೀಡಿದರು. ಈ ವೇಳೆ ಪ್ರತಿಗಳನ್ನು ನೀಡಿದರೆ ಪ್ರತಿಕ್ರಿಯೆ ನೀಡಲು ಅನುಕೂಲವಾಗುತ್ತದೆ. ದಯವಿಟ್ಟು ಬಜೆಟ್ ಪ್ರತಿಗಳನ್ನು ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಪತ್ರಕರ್ತರು ಸಹ ಬಜೆಟ್ ಪ್ರತಿಗೆ ಒತ್ತಾಯಿಸಿದರು.
ಆದರೆ ಇದಕ್ಕೆ ಒಪ್ಪದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿಂದಿನ ಕ್ರಮವನ್ನೇ ಅನುರಿಸಿಕೊಂಡು ಬಂದಿದ್ದಾಗಿ ಹೇಳಿ ತಮ್ಮ ವಾದವನ್ನು ಬಲವಾಗಿ ಸಮರ್ಥಿಸಿಕೊಂಡರು. ಒಂದು ಹಂತದಲ್ಲಿ ಮಾಧ್ಯಮ ಪತ್ರಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದಾಗ ಗದ್ದಲ ಉಂಟಾಯಿತು. ಇದಕ್ಕೆ ಪ್ರತಿಪಕ್ಷಗಳ ಶಾಸಕರು ಸಹ ಮಾಧ್ಯಮ ಪ್ರತಿನಿಧಿಗಳ ಬೆಂಬಲಕ್ಕೆ ನಿಂತರು. ಒಂದು ಹಂತದಲ್ಲಿ ಮಾಧ್ಯಮಗಳು ಕಲಾಪವನ್ನು ಬಹಿಷ್ಕಾರಿಸುವುದಾಗಿ ಹೇಳಿ ಹೊರ ನಡೆಯುತ್ತಿದ್ದಂತೆಯೇ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ, ಪತ್ರಕರ್ತರ ಗ್ಯಾಲರಿಯಲ್ಲಿ ಯಾವುದೇ ಪ್ರತಿನಿಧಿಗಳು ಇಲ್ಲ. ವರದಿ ಮಾಡುವುದಾದರೂ ಹೇಗೆ ಎಂದು ಅಸಾಮಾಧಾನ ವ್ಯಕ್ತಪಡಿಸಿದರು. ಆಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಬಜೆಟ್ ಪ್ರತಿ ನೀಡುವಂತೆ ನಿರ್ದೇಶಿಸಿದರು.