ಬೆಂಗಳೂರು: ಕೊರೊನಾದ ಹೊಸ ರೂಪಾಂತರದಿಂದಾಗಿ ರಾಜ್ಯ, ದೇಶದಲ್ಲಿ ಆತಂಕ ಎದುರಾಗಿದ್ದು, ವಿದೇಶಗಳಿಂದ ಬರುವವರ ಮೇಲೆ ನಿಗಾ ಇಟ್ಟು ಪರಿಶೀಲನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಹೊಸ ಕೊರೊನಾ ಹಬ್ಬಲು ಬಿಡಲ್ಲ. ಆದರೆ ಮಹಾರಾಷ್ಟ್ರ ಮಾದರಿಯಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೊರೊನಾ ರೂಪಾಂತರ ಇಡೀ ರಾಜ್ಯ ಮತ್ತು ದೇಶದ ಜನರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ಚೆನ್ನೈಗೆ ಬಂದಿರುವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಎಷ್ಟು ಕಟ್ಟೆಚ್ಚರ ವಹಿಸಿದರೂ ಕಡಿಮೆಯೇ, ಯಾರೇ ಹೊರಗಡೆಯಿಂದ ಬಂದರೂ ವಿಮಾನ ನಿಲ್ದಾಣದಲ್ಲಿ ನೋಡಿ ಪರಿಶೀಲಿಸಿ ತಪಾಸಣೆ ಮಾಡುತ್ತೇವೆ ಎಂದರು.
'ಈ ವರ್ಷ ಹೊಸ ವರ್ಷಾಚರಣೆ ಇಲ್ಲ'
ದೇಶಾದ್ಯಂತ ಈಗಾಗಲೇ ಅಲರ್ಟ್ ಇದೆ. ಪ್ರಧಾನಿ ಕೂಡಾ ಆತಂಕಕ್ಕೊಳಗಾಗಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ವೈರಸ್ ಹರಡದಂತೆ ಎಲ್ಲ ಎಚ್ಚರಿಕೆ ಕ್ರಮಗಳನ್ನು ವಹಿಸುತ್ತೇವೆ. ಈ ವರ್ಷ ಹೊಸ ವರ್ಷ ಆಚರಣೆಯೇ ಇಲ್ಲ. ಹೊಸ ವರ್ಷ ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ಬಿಡಲ್ಲ ಎಂದು ಸ್ಪಷ್ಟಪಡಿಸಿದರು.
'ನೈಟ್ ಕರ್ಫ್ಯೂ ಅಗತ್ಯವಿಲ್ಲ'
ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ ಆ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಅಗತ್ಯವಿಲ್ಲ ಎಂದು ಸಿಎಂ ತಿಳಿಸಿದರು.